

ಗುಂಡ್ಲುಪೇಟೆ; ಪ್ರತಿಯೊಬ್ಬರಿಗೂ ಕಣ್ಣಿನ ಆರೋಗ್ಯ ಪ್ರಮುಖವಾಗಿದ್ದು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಪಟ್ಟಣ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಎನ್.ಜಯಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದ ಆವರಣದಲ್ಲಿ ಶನಿವಾರ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರುಗಳಿಂದ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಣ್ಣಿನ ಚಿಕಿತ್ಸೆ ದುಬಾರಿಯಾಗುತ್ತಿದ್ದು, ಸ್ವಯಂಸೇವಾ ಸಂಸ್ಥೆಗಳು ಶಿಬಿರಗಳನ್ನು ಆಯೋಜಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದು, ಇನ್ನೂ ಹೆಚ್ಚಿನ ಜನರಿಗೆ ತಲುಪಿಸುವಂತಾಗಬೇಕು. ಸಾರ್ವಜನಿಕರು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಆಧುನಿಕ ಯುಗದಲ್ಲಿ ಮನುಷ್ಯರು ಹಣದ ಹಿಂದೆ ಬಿದ್ದು ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಮನುಷ್ಯ ಏನೇ ಸಾಧನೆ ಮಾಡಿದರೂ ಆರೋಗ್ಯವಾಗಿದ್ದರೆ ಮಾತ್ರ ಅದನ್ನು ನೋಡಲು ಅನುಭವಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲ ವಯೋಮಾನದವರಿಗೂ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಚಿಕಿತ್ಸೆ ಕೂಡ ದುಬಾರಿಯಾಗುತ್ತಿದೆ. ಆದ್ದರಿಂದ ಕಣ್ಣಿನ ಸಮಸ್ಯೆಯಿರುವ ಸಾರ್ವಜನಿಕರು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.
ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಮಾತನಾಡಿ, ನಂ.1 ಕನ್ನಡ ದಿನಪತ್ರಿಕೆ ತನ್ನ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ಶಿಬಿರ ಆಯೋಜಿಸಿ ಸಾರ್ವಜನಿಕರ ಸ್ವಾಸ್ಥೃಕ್ಕೆ ನೆರವಾಗುತ್ತಿದೆ. ಶಿಬಿರದಲ್ಲಿ ಕೇವಲ ಕಣ್ಣಿನ ತಪಾಸಣೆ ಮಾತ್ರವಲ್ಲದೆ ಸಾಮಾನ್ಯ ಆರೋಗ್ಯ ತಪಾಸಣೆ ಮಾಡುತ್ತಿರುವುದು ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ. ಶಸ್ತ್ರಚಿಕಿತ್ಸೆ ಅಗತ್ಯವಿರುವವರನ್ನು ಕೊಯಮತ್ತೂರಿಗೆ ಕರೆದೊಯ್ದು ಉಚಿತ ಚಿಕಿತ್ಸೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರವಿಂದ ಕಣ್ಣಿನ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕಾಂತ್ ಮಾತನಾಡಿ, ಸಕ್ಕರೆ ಕಾಯಿಲೆ ಮನುಷ್ಯದ ಕಣ್ಣಿನ ದೃಷ್ಟಿಯ ಮೇಲೆ ತುಂಬ ಪರಿಣಾಮ ಬೀರುತ್ತಿದ್ದು, ಡಯಾಬಿಟಿಕ್ ರೆಟಿನೋಪತಿಯಿಂದ ಕಣ್ಣಿನ ನರಗಳು ದುರ್ಬಲವಾಗುತ್ತವೆ. 40 ವರ್ಷ ಮೇಲ್ಪಟ್ಟ ಎಲ್ಲರೂ ಕನಿಷ್ಠ ವರ್ಷಕ್ಕೊಮ್ಮೆಯಾದರೂ ಕಣ್ಣಿನ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಈ ಶಿಬಿರಗಳಲ್ಲಿ ತಪಾಸಣೆ ನಡೆಸಿ ಉಚಿತವಾಗಿ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮಾಡಿ ಐಒಎಲ್ ಲೆನ್ಸ್ ಅಳವಡಿಸಿ ದೃಷ್ಟಿ ಉಳಿಸುವಂತೆ ಮಾಡಲಾಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರದಿಂದ ಆಸ್ಪತ್ರೆಯೂ ಪ್ರತಿ ತಿಂಗಳೂ ಅಲ್ಲಲ್ಲಿ ಕ್ಯಾಂಪ್‌ಗಳನ್ನು ಆಯೋಜಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದ್ದು ಆಯಾ ಭಾಗದ ಸಾರ್ವಜನಿಕರು ತಮ್ಮ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಅನುಗ್ರಹ ಫೌಂಡೇಷನ್‌ನ ಕೆ.ರಮೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರಾ.ಬಾಬು, ನಿರ್ದೇಶಕ ಭೈರೇಶ್ ಗಾಣಿಗ್, ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರನಾರಾಯಣಜೋಯಿಸ್, ಎನ್.ನಾಗೇಂದ್ರ, ಎಂ.ಸಿ.ಶಿವಪ್ರಸಾದ್, ನಿತಿನ್ ಮೆಹ್ತಾ ಇದ್ದರು.
ಶಿಬಿರಗಳಲ್ಲಿ ಡಾ.ವಿಕಾಸ್, ಡಾ.ಶರ್ಮಾ ಅವರ ತಂಡ 100ಕ್ಕೂ ಹೆಚ್ಚು ಜನರನ್ನು ತಪಾಸಣೆಗೊಳಪಡಿಸಿ ಶಸ್ತ್ರಚಿಕಿತ್ಸೆ ಅಗತ್ಯವಿದ್ದ 20 ಜನರನ್ನು ಕೊಯಮತ್ತೂರಿಗೆ ಕರೆದೊಯ್ದರು.