

ಪಾತಪಾಳ್ಯ: ಭವಿಷ್ಯದಲ್ಲಿ ಮಕ್ಕಳಿಗೆ ಕಾಡುವ ರೋಗಗಳನ್ನು ತಡೆಯಲು ಮಗು ಹುಟ್ಟಿದಾಗಿನಿಂದಲೇ ನಿಗದಿಪಡಿಸಿರುವ ಎಲ್ಲ ಲಸಿಕೆಗಳನ್ನು ಕೊಡಿಸಬೇಕು ಎಂದು ವೈದ್ಯಾಧಿಕಾರಿ ಡಾ. ಕೆ.ವಿ.ವಿನೋದ್‌ಕುಮಾರ್ ತಿಳಿಸಿದರು.
ಪಾತಪಾಳ್ಯದ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಲಸಿಕಾ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಸಿಕೆಗಳು ಮಾರಣಾಂತಿಕ ರೋಗಗಳಾದ ಡಡಾರ, ಪೋಲಿಯೋ, ಹೆಪಟೈಸಿಸ್ ಮತ್ತು ನಾಯಿ ಕೆಮ್ಮಿನಂತಹ ಕಾಯಿಲೆಗಳನ್ನು ತಡೆಯುತ್ತವೆ. ಈ ರೋಗಗಳು ಅಪಾಯಕಾರಿಯಾಗಿದ್ದು, ಸಾವಿಗೂ ಕಾರಣವಾಗಬಹುದು. ಲಸಿಕೆ ಹಾಕಿಸುವುದರಿಂದ ತೀವ್ರ ಆರೋಗ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಪಾಲಕರು ಮಗುವಿನ ಲಸಿಕೆಗಳ ನಿಗಾ ಇರಿಸಬೇಕು ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಎನ್.ನಾಗಮಣಿ ಮಾತನಾಡಿ, ಗರ್ಭಿಣಿಯರು ಮತ್ತು ಮಕ್ಕಳಿಗೆ ಹಲವಾರು ಬಾರಿ ಲಸಿಕೆ ಮತ್ತು ಚುಚ್ಚುಮದ್ದುಗಳನ್ನು ನೀಡಲಾಗುವುದು. ಆದರೂ ಸುಮಾರು ಮಕ್ಕಳು ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಿ ವಿಶೇಷ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ನೀಡಲಾಗುವುದು ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ ಪಿ.ಎ.ಶಶಿಕಳಾ, ಜೆ.ವಿ. ಹರ್ಷಿಯಾಬಾನು, ಆರೋಗ್ಯ ಸಹಾಯಕಿ ವೈ.ವಿ.ಅರುಣ, ರವಣಮ್ಮ, ಆಶಾ ಕಾರ್ಯಕರ್ತೆಯರಾದ ಲಕ್ಷ್ಮಿ, ಎನ್.ಛಾಯಾದೇವಿ, ಗಂಗರತ್ನ, ಶ್ಯಾಮಲಮ್ಮ, ಮಮತಾ ಮುಂತಾದವರು ಹಾಜರಿದ್ದರು.