

*ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ
* ಗೂಡಂಗಡಿ ಅತಿಕ್ರಮಣದಿಂದ ಇದ್ದೂ ಇಲ್ಲದಂತಿದ್ದ ರಸ್ತೆ
ಚೇತನ್ ಚಕ್ಕೆರೆ ಬಿಡದಿ
ಪಟ್ಟಣದ ಸಾರ್ವಜನಿಕರ ಬಹುವರ್ಷದ ಅಪೇಕ್ಷೆಯಂತೆ ಫುಟ್‌ಪಾತ್ ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಕಾರ್ಯ ಸಾಕಾರವಾಗುತ್ತಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ಹೌದು, ಬಿಡದಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಹಾಗೂ ರಸ್ತೆಯ ಎರಡು ಕಡೆ ಅಂಗಡಿ ಇಟ್ಟುಕೊಂಡಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಪ್ರತಿನಿತ್ಯ ಕಿರಿಕಿರಿ ಉಂಟಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದ್ದರು. ಈಗ ಪೊಲೀಸರಿಂದ ಇದಕ್ಕೆಲ್ಲ ಮುಕ್ತಿ ಸಿಕ್ಕಿದೆ.
ಬಿಡದಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿದೆ ಹಾಗೂ ಬೃಹತ್ ಕೈಗಾರಿಕಾ ಪ್ರದೇಶ ಹೊಂದಿದ್ದು, ಪ್ರತಿನಿತ್ಯ ನೂರಾರು ಜನರು ಕೆಲಸ ಕಾರ್ಯಗಳ ನಿಮಿತ್ತ ಪಟ್ಟಣಕ್ಕೆ ಬರುತ್ತಾರೆ. ಈ ವೇಳೆ ರಸ್ತೆ ಪಕ್ಕದಲ್ಲೇ ವಾಹನ ನಿಲ್ಲಿಸುತ್ತಿದ್ದರು. ಇದರಿಂದಾಗಿ ಬೃಹತ್ ವಾಹನಗಳು ಸಂಚರಿಸಲು ಸಮಸ್ಯೆಯಾಗಿತ್ತು. ಕೆಲವು ಬಾರಿ ಎರಡೂ ಕಡೆಯಿಂದ ಭಾರಿ ವಾಹನಗಳು ಎದುರು ಬಂದು ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾದ ಹಲವು ನಿರ್ದೇಶನಗಳು ಇವೆ.
ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಪೊಲೀಸರು, ಬಿಜಿಎಸ್ ವೃತ್ತದಿಂದ ಕಾಕರಾಮನಹಳ್ಳಿ ಅವರಗೆರೆ, ಮಂಚನಬಲೆ ಜಲಾಶಯ ಸೇರಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಬೈಕ್ ಹಾಗೂ ಕಾರು, ಆಟೋಗಳ ಪಾರ್ಕಿಂಗ್‌ಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಸಮ ಹಾಗೂ ಬೆಸ ಸಂಖ್ಯೆಯ ಪಾರ್ಕಿಂಗ್ ವ್ಯವಸ್ಥೆ ಜಾರಿ ಮಾಡಿದ್ದಾರೆ. ಎರಡು ಕಡೆ ವಾರದ 7 ದಿನಗಳಲ್ಲಿ ಯಾವ ದಿನ ಯಾವ ಕಡೆ ವಾಹನಗಳ ಪಾರ್ಕಿಂಗ್ ಮಾಡಬೇಕೆಂಬ ಸೂಚನಾ ಫಲಕ ಅಳವಡಿಸಲಾಗುತ್ತಿದೆ.
ಬಹಳಷ್ಟು ವರ್ಷಗಳಿಂದ ರಸ್ತೆ ಅಭಿವದ್ಧಿಯಾದರೂ ಹೃದಯಭಾಗದ ಪ್ರಮುಖ ಸ್ಥಳಗಳಲ್ಲಿ ವಾಣಿಜ್ಯ ಸಂಕೀರ್ಣ, ಕಚೇರಿ ಕಟ್ಟಡಗಳು ತಲೆ ಎತ್ತಿದ್ದರೂ ಫುಟ್‌ಪಾತ್ ಇದ್ದೂ, ಇಲ್ಲದಂತೆ ರಸ್ತೆ ನಡುವೆಯೇ ವ್ಯಾಪಾರವಹಿವಾಟು ನಡೆದಿತ್ತು. ರಸ್ತೆ ಇದ್ದರೂ ಗೂಡಂಗಡಿಗಳ ಅತಿಕ್ರಮಣದಿಂದ ತೊಂದರೆಯಾಗಿತ್ತು. ಇದರಿಂದ ವಾಹನ, ಪಾದಚಾರಿಗಳ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಬೆಂಗಳೂರು- ಮೈಸೂರು ಹೆದ್ದಾರಿಯ ಇಕ್ಕೆಲಗಳಲ್ಲಿ ಹಾಗೂ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎಲ್ಲೆಲ್ಲಿ ಫುಟ್ ಪಾತ್ ವ್ಯಾಪಾರದಿಂದ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂಬುದನ್ನು ಗುರುತಿಸಿ ಅಂತವರನ್ನು ಅಲ್ಲಿಂದ ಸ್ಥಳಾಂತರ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ಇವರಿಗೆಲ್ಲ ಚೌಕಿ ಮಠದ ಜಾಗದಲ್ಲಿ ಸ್ಥಳಾವಕಾಶ ಮಾಡಿಕೊಡಲು ಚಿಂತನೆ ನಡೆಸಲಾಗಿದೆ.
ಪೊಲೀಸ್ ಠಾಣೆ ಪಕ್ಕದಲ್ಲೆ ಸಾರಿಗೆ ಬಸ್ ತಂಗುದಾಣ ನಿರ್ಮಾಣ ಮಾಡಲಾಗಿತ್ತು. ಆದರೆ ಈ ತಂಗುದಾಣ ಪ್ರಯಾಣಿಕರ ಅನುಕೂಲಕ್ಕೆ ಬಾರದೆ ವಾಹನಗಳ ಪಾರ್ಕಿಂಗ್ ಹಾಗೂ ನಿರಾಶ್ರಿತರ ತಾಣವಾಗಿತ್ತು. ಮೈಸೂರಿನಿಂದ ಬರುವ ಸಾರಿಗೆ ಬಸ್‌ಗಳು ಈ ತಂಗುದಾಣಕ್ಕೆ ಬಾರದೆ ಹೆದ್ದಾರಿಯಲ್ಲೇ ನಿಲ್ಲಿಸುತ್ತಿದ್ದವು. ತಂಗುದಾಣಕ್ಕೆ ಬಸ್‌ಗಳು ಬರುವ ಜಾಗದಲ್ಲಿ ಖಾಸಗಿ ತಟ್ಟೆ ಇಡ್ಲಿ ಹೋಟೆಲ್ಗಳು ಗ್ರಾಹಕರ ಪಾರ್ಕಿಂಗ್ ಸ್ಥಳವಾಗಿ ಮಾಡಿಕೊಂಡಿದ್ದರು. ಈಗ ಅಲ್ಲ್ಲಿ ಯಾವುದೇ ವಾಹನಗಳ ನಿಲ್ಲಿಸದಂತೆ ನಿರ್ಬಂಧ ಹೇರಲಾಗಿದ್ದು, ಸಾರಿಗೆ ಬಸ್‌ಗಳು ತಂಗುದಾಣದ ಕಡೆಗೆ ಬರುವಂತೆ ಮಾಡಲಾಗಿದೆ.