

ಯಳಂದೂರು: ಈ ಬಾರಿಯ ಸ್ವಾತಂತ್ರೃ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಜಯಪ್ರಕಾಶ್ ಸೂಚನೆ ನೀಡಿದರು.
ಪಟ್ಟಣದ ತಾಲೂಕು ತಹಸೀಲ್ದಾರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣತಂತ್ರ ದಿನಾಚರಣೆ ರಾಷ್ಟ್ರೀಯ ಹಬ್ಬಗಳ ಸಾಲಿನಲ್ಲಿ ಮಹತ್ತರ ಪಡೆದುಕೊಂಡಿರುವ ಭಾರತೀಯರ ಪ್ರಮುಖ ಉತ್ಸವಗಳಾಗಿವೆ. ಇದನ್ನು ಎಲ್ಲರೂ ಸೇರಿ ಆಚರಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ತಾಲೂಕು ಆಡಳಿತ ವತಿಯಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ತಪ್ಪದೆ ಎಲ್ಲ ಇಲಾಖೆಯ ನೌಕರರು, ಪಿಯುಸಿ, ಪದವಿ ಕಾಲೇಜಿನ ನೌಕರರು, ಉಪನ್ಯಾಸಕರು ಕಡ್ಡಾಯವಾಗಿ ಭಾಗವಹಿಸಬೇಕು, ಇಲ್ಲವಾದಲ್ಲಿ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಇಲಾಖೆಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಶಾಲಾ ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಯಾರಿಗೊಳಿಸುವ ಕೆಲಸ ಶಿಕ್ಷಣ ಇಲಾಖೆ ನಿರ್ವಹಿಸಬೇಕು. ಎಲ್ಲ ಇಲಾಖೆ ಅಧಿಕಾರಿಗಳು ಜವಾಬ್ದಾರಿಯನ್ನು ಚಾಚೂತಪ್ಪದೆ ನಿರ್ವಹಿಸಬೇಕು ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಮಹೇಶ್ ಕುಮಾರ್, ಬಿಇಒ ಕೆ.ಕಾಂತರಾಜು, ಸಮಾಜ ಸೇವಕ ಪಿ.ವೀರಭದ್ರಪ್ಪ, ಪಪಂ ಸದಸ್ಯರಾದ ಮಹೇಶ್, ತಾಪಂ ಮಾಜಿ ಸದಸ್ಯ ವೈ.ಕೆ.ಮೋಳೆ ನಾಗರಾಜು, ಕೃಷಿ ಸಹಾಯಕ ನಿರ್ದೇಶಕ ಅಮೃತೇಶ್ವರ, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಕಂದಹಳ್ಳಿ ನಾರಾಯಣ್ ಮತ್ತಿತರರಿದ್ದರು.