ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗಲಿ

FotoJet (6)
Published on

ಮಲ್ಲೇಶ್ ಗುರೂಜಿ ಒತ್ತಾಯ | ರೈತ ದಿನಾಚರಣೆಯಲ್ಲಿ ಕೃಷಿ ಸಾಧಕರಿಗೆ ಸನ್ಮಾನ

 ಮಾಗಡಿ : ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಕ್ಕಾಂಗ ಮಾತ್ರ ರೈತಕುಲ ಉಳಿಯಲು ಸಾಧ್ಯ ಎಂದು ಚನ್ನಪಟ್ಟಣ ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ ಹೇಳಿದರು.

ಪಟ್ಟಣದ ಕಲ್ಯಾಗೇಟ್‌ನಲ್ಲಿ ರೈತಸಂಘದಿಂದ ರೈತ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಎಲ್ಲ ವಸ್ತುಗಳಿಗೂ ನಿಗದಿತ ಬೆಲೆ ಇದೆ. ಆದರೆ ರೈತ ಬೆಳೆದ ಬೆಳೆಗೆ ನಿಗದಿತ ಬೆಲೆ ಇಲ್ಲ. ದೇಶ ಸ್ವಾತಂತ್ರ್ಯಗೊಂಡು ಇಷ್ಟು ವರ್ಷಕಳೆದರೂ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಇರುವುದು ನಮ್ಮ ದುರಂತ. ರೈತರು ಸಂಘಟಿತರಾಗಿ ಹೋರಾಟ ಮಾಡಿ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಧಕ್ಕಿಸಿಕೊಳ್ಳಬೇಕು ಎಂದರು.

ಎಷ್ಟೆ ಕಷ್ಟಬಂದರೂ ವ್ಯವಸಾಯ ಮರೆಯಬಾರದು. ಯಾವುದೇ ಕಾರಣಕ್ಕೂ ಜಮೀನನ್ನು ಮಾರಾಟಮಾಡಬಾರದು. ಅಸ್ತಿ ಮಾರಾಟ ಮಾಡಿದವರೆಷ್ಟೋ ಮಂದಿ ಇಂದು ಬೀದಿಗೆ ಬಂದಿದ್ದಾರೆ ಎಂದು ಮಲ್ಲೇಶ್ ಗುರೂಜಿ ಎಚ್ಚರಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಮಾತನಾಡಿ,ಹೇಮಾವತಿ ನೀರಿನ ವಿಚಾರವಾಗಿ ಮಾಗಡಿ-ಕುಣಿಗಲ್ ತಾಲೂಕಿನ ರೈತ ಮುಖಂಡರಿಗೂ ಜಿದ್ದಾಜಿದ್ದಿ ಇದೆ. ಇಲ್ಲಿನ ರೈತರು ಪ್ರತಿರೋಧಿಸಬೇಕು. ಚುರುಕಾಗಬೇಕು. ನಮ್ಮ ಹಕ್ಕನ್ನು ಕೇಳುವ ಶಕ್ತಿ ಪಡೆದುಕೊಳ್ಳದಿದ್ದರೆ ಮುಂದಿನ ಜೀವನ ಕಷ್ಟಕರ. ಕೆಲ ಜನಪ್ರತಿನಿಧಿಗಳು ಹೋರಾಟದಲ್ಲಿ ಕೈ ಜೋಡಿಸಿದರು. ಇನ್ಕೆಲವರು ಕೈ ಜೋಡಿಸಿಲ್ಲ. ಒಗ್ಗಟ್ಟಿದ್ದರಷ್ಟೇ ತುಮಕೂರಲ್ಲ ಯಾರೇ ಬಂದರೂ ನಾವು ಜಯಿಸಿ, ನೀರು ತರುತ್ತೇವೆ ಎಂದು ವಾಗ್ದಾನವಿಟ್ಟ ಲೋಕೇಶ್, ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ನಡೆಯುತ್ತಿದ್ದು, ನೋಂದಣಿ ಕಾಲಾವಕಾಶವನ್ನು 15 ದಿವಸ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಹೇಮಾವತಿ ನೀರನ್ನು ಪೈಪ್ ಮೂಲಕ ಮಾಗಡಿ ಕೆರೆ ತುಂಬಿಸಿದರೆ ನಮ್ಮ ರೈತರು ಬದುಕುತ್ತಾರೆ ಎಂದು ಎಚ್.ಎಂ.ರೇವಣ್ಣ, ಡಿ.ಕೆ.ಸುರೇಶ್ ಹಾಗೂ ನಾನು ಯೋಜನೆಯನ್ನು ಕೈಗೊಂಡು, ಒಂದು ಹಂತಕ್ಕೆ ತಂದು ನಿಲ್ಲಿಸಿದ್ದೆವು. ತುಮಕೂರಿನವರು 24 ಟಿಎಂಸಿಯನ್ನು ಕೃಷಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ನಮ್ಮ ಹಕ್ಕು 0.64 ಟಿಎಂಸಿ. ಅದೂ ಸಹ ಕುಡಿಯುವ ನೀರಿನ ಉದ್ದೇಶಕ್ಕಾಗಿ. ಹಾಗಾಗಿ ಹೇಮಾವತಿ ನೀರು ಮಾಗಡಿಗೆ ತರುವುದನ್ನು ತಡೆಯಲೂ ಯಾರಿಂದಲೂ ಸಾಧ್ಯವಿಲ್ಲ ಎಂದರು.

ನಾವು ಹೇಮಾವತಿ ಯೋಜನೆ ಕೈಗೊಂಡಾಗ ಟಿ.ಬಿ.ಜಯಚಂದ್ರ ಮಂತ್ರಿಯಾಗಿದ್ದು, ಇದಕ್ಕೆ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಎಲ್ಲರೂ ಅನುದಾನ ಕೊಟ್ಟಿದ್ದಾರೆ. ಹಾಗಾಗಿ ಮಾಗಡಿಗೆ ನೀರು ಹರಿಸರು ಯಾರು ಅಡ್ಡಿ ಮಾಡಿಲ್ಲ. ಆದರೀಗ ಅಲ್ಲಿನನವರು ನಮ್ಮ ರೈತ ಸಂಘಟನೆಗಳ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಂಜುನಾಥ್ ಹೇಳಿದರು.

ರೈತರಿಗೆ ಉಳುಮೆ ಚೀಟಿ ಕೊಡಲು ತಾಲೂಕು ಆಡಳಿತಕ್ಕೆ ಆಗುತ್ತಿಲ್ಲ. ಬೋಗಸ್ ದಾಖಲೆಗಳನ್ನು ನೀಡಿರುವುದರಿಂದ ತೊಂದರೆ ಆಗುತ್ತಿದೆ. ಬೆಳೆಗಳಿಗೆ ವಿಮೆ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. ವಿಮೆ ಕಂಪನಿಗಳು ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಯಾವ ಸರ್ಕಾರ ಬಂದರೂ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ದೂರಿದರು.

ರೈತಸಂಘದ ಉಪಾಧ್ಯಕ್ಷ ಮಲ್ಲಯ್ಯ, ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಎಚ್.ಎನ್.ಅಶೋಕ್, ಪುರಸಭೆ ಅಧ್ಯಕ್ಷೆ ರಮ್ಯ ನರಸಿಂಹಮೂರ್ತಿ, ಚಿತ್ರನಟ ಕರಿಸುಬ್ಬು, ಜಿಪಂ ಮಾಜಿ ಅಧ್ಯಕ್ಷ ಎಂಕೆ.ಧನಂಜಯ, ಜೆಪಿ.ಚಂದ್ರೇಗೌಡ, ಶೈಲಜಾ, ಬಿಜೆಪಿ ಮುಖಂಡ ಪ್ರಸಾದ್ ಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ವೀರಭದ್ರಯ್ಯ, ಎಚ್.ಎಂ.ಕೃಷ್ಣಮೂರ್ತಿ, ಸಂಶೋಧಕ ಪ್ರೊ.ಮುನಿರಾಜಪ್ಪ, ಎಂಎಂಆರ್ ಆಸ್ಪತ್ರೆ ಚೇತನ್, ರೈತಮುಖಂಡರಾದ ಶಿವಲಿಂಗಯ್ಯ, ಚಂದ್ರಾಯಪ್ಪ, ಧನಂಜಯ, ರವಿಕುಮಾರು, ಕಾಂತರಾಜು, ರಾಮಚಂದ್ರು, ಲೋಕೇಶ್, ಮುನಿರಾಜು, ಶಂಕರಯ್ಯ, ಬುಡಾನ್ ಸಾಬ್ ಇದ್ದರು.

ಹೇಮಾವತಿ ನೀರಿಗಾಗಿ ಧ್ವನಿಸಿ

ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಮಾತನಾಡಿ,ರೈತಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ. ಬದಲಾಗಿ ಮಧ್ಯವರ್ತಿಗಳಿಗೆ ಲಾಭವಾಗುತ್ತಿದೆ. ಹೇಮಾವತಿ ನೀರಿಗಾಗಿ ರೈತಸಂಘಟನೆ ಹೋರಾಟ ಮಾಡಿದರೂ ರಾಜಕೀಯ ಮುಖಂಡರು ಧ್ವನಿಗೂಡಿಸುತ್ತಿಲ್ಲ. ತುಮಕೂರಿನಲ್ಲಿ ಚುನಾಯಿತ ಪ್ರತಿನಿಧಿಗಳು ಹೋರಾಟ ನಡೆಸುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಹೋರಾಟ ನಡೆಸದೆ ರೈತರಿಗೆ ಅವಮಾನಮಾಡುತ್ತಿದ್ದಾರೆ ಎಂದರು.

ನೀರಾವರಿಗೆ 540 ಕೋಟಿ ರೂ. ಯೋಜನೆ

ರಾಮನಗರಕ್ಕೆ ನೀರು ತರಲು ಶಿಂಷಾ, ದೇವೇಗೌಡ ಬ್ಯಾರೇಜಿನಿಂದ ವೈ.ಜಿ.ಗುಡ್ಡ, ಮಂಚನಬೆಲೆಗೆ ನೀರು ತರಲು 540 ಕೋಟಿ ರೂ. ಯೋಜನೆ ಇದೆ. ರೈಸಿಂಗ್ ಮೈನ್ ಆನ್ ಮಾಡಬೇಕು. ಇದನ್ನು ಮಾಡಲು ತಾಂತ್ರಿಕ ಸಮಸ್ಯೆಗಳಿವೆ. ನನ್ನ ಅವಧಿಯಲ್ಲಿ ನೋಟಿಫಿಕೇಶನ್ ಮಾಡಿಸಲಾಗಿದೆ. ಯಾರೂ ಆತಂಕ ಪಡಬೇಕಾಗಿಲ್ಲ. ರೈತರಿಗೆ ಅನುಕೂಲವಾಗಬೇಕು. ಎಪಿಎಂಸಿ ಮಾರುಕಟ್ಟೆ ಆಗಬೇಕು. ರೈತರು ಸರ್ಕಾರದಿಂದ ಮಾಡಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಎ.ಮಂಜುನಾಥ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net