ಆರ್‌ಎಸ್‌ಎಸ್ ನಿಯಂತ್ರಿಸುವ ಮನಸ್ಥಿತಿಯಿಂದ ಹೊರಬನ್ನಿ; ಮಾಜಿ ಶಾಸಕ ಪ್ರೀತಂ ಜೆ.ಗೌಡ

ಆರ್‌ಎಸ್‌ಎಸ್ ನಿಯಂತ್ರಿಸುವ ಮನಸ್ಥಿತಿಯಿಂದ ಹೊರಬನ್ನಿ; ಮಾಜಿ ಶಾಸಕ ಪ್ರೀತಂ ಜೆ.ಗೌಡ
Published on

ಹಾಸನ: ನೂರನೇ ವರ್ಷದಲ್ಲಿರುವ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಮಾಜಿ ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ಕುಟುಂಬ ಸಮೇತ ಹಾಸನಾಂಬೆ ದರ್ಶನ ಪಡೆದ ನಂತರ ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿದ ಅವರು, ಶತಾಬ್ದಿ ವರ್ಷದಲ್ಲಿ, ವೈಚಾರಿಕ ಹಿನ್ನೆಲೆ ಇರುವಂತ ನಮ್ಮ ಮಾತೃ ಸಂಸ್ಥೆ ಬಗ್ಗೆ ಹಲವರು ಬೇಡವಾದ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಎಲ್ಲವನ್ನೂ ಮೆಟ್ಟಿ ನಿಂತು ಧರ್ಮರಕ್ಷಣೆ, ರಾಷ್ಟ್ರೀಯತೆ ಬಗ್ಗೆ ಕಲ್ಪನೆ ಕೊಟ್ಟಿರುವುದು ಆರ್‌ಎಸ್‌ಎಸ್ ಎಂದರು.

ಯಾರಿಗೆ ಆರ್‌ಎಸ್‌ಎಸ್ ಕಲ್ಪನೆ ಇರೋದಿಲ್ಲವೋ ಅವರು ಹಗುರವಾಗಿ ಮಾತನಾಡುತ್ತಾರೆ. ನಾನು ಯಾರ ಬಗ್ಗೆ ವೈಯಕ್ತಿಕವಾಗಿ ಮಾತನಾಡಲು ಹೋಗುವುದಿಲ್ಲ. ಆದರೆ, ವಸ್ತುಸ್ಥಿತಿ ಗೊತ್ತಿಲ್ಲದೆ, ವಿಚಾರ ಗೊತ್ತಿಲ್ಲದೆ ಯಾರೂ ಗಾಳಿಯಲ್ಲಿ ಗುಂಡು ಹೊಡೆಯಬಾರದು. ಆರ್‌ಎಸ್‌ಎಸ್ ಬಗ್ಗೆ ಕಾಳಜಿ ಇರುವವರಿಗೆ, ಇಲ್ಲದೇ ಇರುವವರೆಲ್ಲರಿಗೂ ಕೂಡ ಹಾಸನಾಂಬೆ ಸಮೃದ್ಧಿ ಕೊಡಲಿ. ದೇಶದ ವಿರುದ್ಧ ಒಗ್ಗಟ್ಟಾಗಿರುವಂತಹವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದರು.

ಒಂದು ವರ್ಗವನ್ನು ಓಲೈಸುವ ಬದಲು ಮಾನಸಿಕತೆ ಬದಲಾಗಬೇಕು. ಆರ್‌ಎಸ್‌ಎಸ್ ಕಾರ್ಯಶೈಲಿ ಯಾವ ಯಾವ ರೀತಿ ಇದೆ, ಹೇಗೆ ಕೆಲಸ ಮಾಡುತ್ತಿದೆ ನೋಡಲಿ. ರಾಷ್ಟ್ರದ ಅಖಂಡತೆ ಮತ್ತು ಯುವ ಸಮುದಾಯದಲ್ಲಿ ದೇಶಪ್ರೇಮ ಬೆಳೆಸುವ ಕೆಲಸ ಮಾಡುತ್ತಿದೆ. ಅದರ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು. ಆರ್‌ಎಸ್‌ಎಸ್‌ನ ಶಕ್ತಿ ಕಡಿಮೆ ಮಾಡಬಹುದು ಎಂದು ಚಟುವಟಿಕೆ ನಿರ್ಬಂಧಿಸಲು ಹೊರಡಬಾರದು. ಕಲ್ಪನೆಯಲ್ಲಿದ್ದರೆ, ಅದರಿಂದ ಹೊರ ಬರಬೇಕು. ಅದನ್ನೆಲ್ಲ ಮೀರಿ ಬೆಳೆದಿರುವಂತಹ ಸಂಸ್ಥೆ. ರಾಷ್ಟ್ರಪತಿ, ಪ್ರಧಾನಿ, ಆರ್‌ಎಸ್‌ಎಸ್‌ನಲ್ಲಿ ತಮ್ಮ ಚಟುವಟಿಕೆ ಮಾಡಿ ಉತ್ತಮ ಕೆಲಸ ಮಾಡಲಿಕ್ಕೆ ರೂಪುಗೊಂಡಿರುವವರು ಎಂದರು.

ಹೊಸ ಕಾಯಕಲ್ಪ: ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ನೇತೃತ್ವದಲ್ಲಿ ಹೊಸ ಕಾಯಕಲ್ಪ ನೀಡಿದ್ದಾರೆ. ಅತಿ ಹೆಚ್ಚು ಭಕ್ತರು ಬರುತ್ತಿದ್ದಾರೆ. ಅದರ ನಡುವೆಯೂ ಕೆಲ ಸವಾಲು ಇದೆ. ಹಾಸನಾಂಬೆಗೆ ಬಂದಿರುವ ಎಲ್ಲ ಭಕ್ತರಿಗೂ ಸ್ವಾಗತ ಕೋರುತ್ತೇನೆ ಎಂದರು. ನಾನು ಕೂಡ ಐದು ವರ್ಷ ಶಾಸಕನಾಗಿ ದಿನಕ್ಕೆ 18, 20 ಗಂಟೆ ಕೆಲಸ ಮಾಡಿದ್ದೇನೆ, ನಾವಿದ್ದಾಗ ಒಂದು ರೀತಿ ಬದಲಾವಣೆ ಆಗಿತ್ತು. ವರ್ಷದಿಂದ ವರ್ಷಕ್ಕೆ ಕೆಲ ಬದಲಾವಣೆಗಳು ಆಗುತ್ತವೆ. ಈ ಬಾರಿಯ ವ್ಯವಸ್ಥೆಗೆ ಉಸ್ತುವಾರಿ ಸಚಿವರ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿದ್ದೇವೆ. ಹಾಸನಕ್ಕೆ ಒಳ್ಳೆಯ ಹೆಸರು ಬರಲಿ ಎನ್ನೋದು ನಮ್ಮ ಕೋರಿಕೆ ಮತ್ತು ಬೇಡಿಕೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net