ಸ್ಥಳೀಯವಾಗಿ ಉದ್ಯೋಗ ದೊರೆಯಲಿ

FotoJet
Published on

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಶಯ

ರಾಮನಗರ : ಉದ್ಯೋಗ ಎಂಬುದು ಬೆಂಗಳೂರು ಕೇಂದ್ರಿತವಾಗಿದೆ. ಆದ್ದರಿಂದ ಸ್ಥಳೀಯವಾಗಿಯೇ ಉದ್ಯೋಗ ಸಿಗುವಂತೆ ಮಾಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೌಶಲಾಭಿವೃದ್ಧಿ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಚನ್ನಪಟ್ಟಣದಲ್ಲಿ ದೊಡ್ಡ ದೊಡ್ಡ ನಾಯಕರೇ ಇದ್ದಾರೆ. ಆದರೆ, ಅವರ‌್ಯಾಕೆ ಇಲ್ಲಿ ಉದ್ಯೋಗ ಮೇಳ ಮಾಡಲಿಲ್ಲ ಎಂದು ಪ್ರಶ್ನಿಸಿದ ಡಿಕೆಶಿ, ಬೆಂಗಳೂರಿಗೆ ಬಂದರೆ 20 ಸಾವಿರ ಸಂಬಳ ಕೊಡುತ್ತಾರೆ. ಇದರಲ್ಲೂ ಅರ್ಧದಷ್ಟು ದುಡ್ಡನ್ನು ವಾಸ ಮಾಡಲು ಕೊಡಬೇಕೆನ್ನುವ ನೋವು ಗ್ರಾಮೀಣ ಜನರಿಗಿದೆ. ಆದರೆ, ಸ್ಥಳೀಯವಾಗಿಯೇ ಉದ್ಯೋಗ ದೊರಕಿ, ಸಂಜೆ ವೇಳೆ ಮನೆಗೆ ತಲುಪುವಂತಾದರೆ ಇದರಿಂದ ಸಾಕಷ್ಟು ಹಣ ಉಳಿತಾಯ ಆಗುತ್ತದೆ ಎಂದರು.
ನಮ್ಮ ಜನ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಮಾತ್ರ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿ ಆಗಬೇಕು. ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವುದರಿಂದ ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ
ಯುವ ಸಮುದಾಯ ಉದ್ಯೋಗ ಸಿಗಲಿಲ್ಲ ಎನ್ನುವ ಕಾರಣಕ್ಕೆ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ. ಇವುಗಳನ್ನು ಬಳಕೆ ಮಾಡಿಕೊಂಡು ಉದ್ಯೋಗ ಕಂಡುಕೊಳ್ಳಬೇಕು. ಈ ಉದ್ಯೋಗ ಮೇಳದ ಬಗ್ಗೆಯೂ ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಆದರೆ, ಜಿಲ್ಲೆಯ ಯುವ ಸಮುದಾಯಕ್ಕೆ ಹೊಸ ಅವಕಾಶ ದೊರೆತಂತಾಗಿದೆ ಎನ್ನುವ ಆತ್ಮತೃಪ್ತಿ ನನಗಿದೆ ಎಂದು ಶಿವಕುಮಾರ್ ಹೇಳಿದರು.

ಚನ್ನಪಟ್ಟಣ ಶಿಕ್ಷಣವಂತರ ಕ್ಷೇತ್ರ
ಚನ್ನಪಟ್ಟಣ ಸುಶಿಕ್ಷಿತರ ಕ್ಷೇತ್ರ ಎನ್ನುವ ಬಿರುದು ಹಿಂದಿನಿಂದಲೂ ಪಡೆದುಕೊಂಡಿದೆ. ಸ್ವಾತಂತ್ರ್ಯ ಕಾಲದಲ್ಲಿಯೇ ಅತಿ ಹೆಚ್ಚು ಪದವೀಧರರನ್ನು ಹೊಂದಿದ ತಾಲೂಕು ಇದಾಗಿತ್ತು. ಪ್ರಪಂಚದ ಶ್ರೇಷ್ಠ ಅರ್ಥ ಶಾಸಜ್ಞ ಪ್ರೊ.ಕೆ. ವೆಂಕಟಗಿರಿಗೌಡರು ಇದೇ ತಾಲೂಕಿನವರು. ನಾಡಿನ ಮೊದಲ ವಿದ್ಯಾಮಂತ್ರಿ ವಿ.ವೆಂಕಟಪ್ಪ ಅವರು ಇಲ್ಲಿಯವರೇ, ಸಾಹಿತಿಗಳು, ವಿಜ್ಞಾನಿಗಳನ್ನು ಕೊಡುಗೆಯಾಗಿ ನೀಡಿದ ತಾಲೂಕು ಚನ್ನಪಟ್ಟಣ ಎಂದು ಶಿವಕುಮಾರ್ ಬಣ್ಣಿಸಿದರು.

ದೇಶದ ದೊಡ್ಡ ದುರಂತ ನಿರುದ್ಯೋಗ
ಕೌಶಲಾಭಿವೃದ್ಧಿ ಇಲಾಖೆ ಸಚಿವ ಶರಣ್ ಪ್ರಕಾಶ್ ಪಾಟೀಲ್ ಮಾತನಾಡಿ, ದೇಶದ ಇಂದಿನ ದೊಡ್ಡ ದುರಂತ ನಿರುದ್ಯೋಗ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಯುವ ನಿಧಿಯನ್ನು ಜಾರಿಗೆ ತಂದಿದೆ. ಇದು ಪದವೀಧರರಿಗೆ ನೀಡುವ ನಿರುದ್ಯೋಗ ಭತ್ಯೆ ಅಲ್ಲ. ಬದಲಿಗೆ ಅವರು ತಮ್ಮ ಉದ್ಯೋಗ ಹುಡುಕಾಟಕ್ಕೆ ಯಾರ ಮೇಲೂ ಅವಲಂಬಿತವಾಗಬಾರದು ಎನ್ನುವ ಕಾರಣ ನೀಡುವ ಪ್ರೋತ್ಸಾಹ ಧನ. ಇದರ ಜತೆಗೆ ಯುವ ಸಮುದಾಯಕ್ಕೆ ಉದ್ಯೋಗ ನೀಡುವ ನಿಟ್ಟಿನಲ್ಲಿ 25 ಸಾವಿರಕ್ಕೂ ಹೆಚ್ಚು ಕೌಶಲಗಳನ್ನು ಕೊಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ರಾಜ್ಯದ ಕೊಪ್ಪಳ, ಮೈಸೂರು ಮತ್ತು ಕಲಬುರಗಿಯಲ್ಲಿ ಹೊಸ ಕೌಶಲಾಭಿವೃದ್ಧಿ ಕೇಂದ್ರ ಆರಂಭಿಸಲಾಗುತ್ತಿದೆ ಎಂದ ಅವರು, ಉದ್ಯೋಗ ಮೇಳದಲ್ಲಿ ಉದ್ಯೋಗ ದೊರೆಯದವರು ಹತಾಶರಾಗಬೇಕಿಲ್ಲ. ಅರ್ಜಿ ಹಾಕಿದವರ ಮಾಹಿತಿ ನಮ್ಮ ಬಳಿ ಇರಲಿದ್ದು, ಅಗತ್ಯ ಬಿದ್ದರೆ ಹೆಚ್ಚಿನ ಕೌಶಲ ತರಬೇತಿ ನೀಡಿ, ಬೇರೆಡೆ ಕೆಲಸ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಐಟಿ ಕ್ಷೇತ್ರದಲ್ಲಿ ಕೆಲಸ
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಯುಪಿಎ ಅವಧಿಯಲ್ಲಿ ನವೋಧ್ಯಮಗಳನ್ನು ಸ್ಥಾಪನೆ ಮಾಡುವ ಮೂಲಕ ಹೊಸ ಉದ್ಯೋಗ ಸೃಷ್ಟಿಸಲಾಗಿತ್ತು. ಆದರೆ, ಈಗ ಅದು ಆಗುತ್ತಿಲ್ಲ. ಹಿಂದೆಯೂ ರಾಜ್ಯದಲ್ಲಿ ವೀರಪ್ಪ ಮೊಯ್ಲಿ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಐಟಿ ಕ್ಷೇತ್ರಕ್ಕೆ ನಾಂದಿ ಹಾಡಿದರು. ನಂತರ ಎಸ್.ಎಂ.ಕೃಷ್ಣ ಅವರು ಉತ್ತೇಜನ ನೀಡಿದರು. ಇದಕ್ಕೆ ಪೂರಕವಾಗಿ ಹಲವಾರು ಮಂದಿಗೆ ಉದ್ಯೋಗ ದೊರೆತಿದೆ. ದೇಶ ಮತ್ತು ರಾಜ್ಯದಲ್ಲಿ ಹೂಡಿಕೆದಾರರ ಸ್ನೇಹಿ ವಾತಾವರಣ ನಿರ್ಮಾಣ ಮಾಡಿದರೆ ಖಂಡಿತವಾಗಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಎಚ್.ಸಿ.ಬಾಲಕೃಷ್ಣ, ಎಂಎಲ್‌ಸಿಗಳಾದ ಎಸ್.ರವಿ, ರಾಮೋಜಿಗೌಡ, ಸುಧಾಮ್ ದಾಸ್, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತ ನಾಯಕ್, ಎಂಡಿ ಕನಕವಲ್ಲಿ, ಪ್ರಾಧಿಕಾರದ ಅಧ್ಯಕ್ಷರಾದ ರಘುನಂದನ್ ರಾಮಣ್ಣ, ಗಾಣಕಲ್ ನಟರಾಜ್, ಚೇತನ್‌ಕುಮಾರ್, ಎಸ್.ಆರ್.ಪ್ರಮೋದ್ ಕೆ.ರಾಜು, ಡಿಸಿ ಯಶವಂತ್ ವಿ.ಗುರುಕರ್, ಎಸ್‌ಪಿ ಕಾರ್ತಿಕ್‌ರೆಡ್ಡಿ, ಸಿಇಒ ದಿಗ್ವಿಜಯ್ ಬೋಡ್ಕೆ ಮುಂತಾದವರು ಇದ್ದರು.

ಡಿಕೆಶಿ ಭೇಟಿ
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಾಲಾ ಆವರಣದಲ್ಲಿದ್ದ ಉದ್ಯೋಗ ನೋಂದಣಿ ಕೌಂಟರ್‌ಗಳು ಮತ್ತು ಸಂದರ್ಶನ ಕೌಂಟರ್‌ಗಳಿಗೆ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರೊಂದಿಗೆ ತೆರಳಿದ ಡಿ.ಕೆ.ಶಿವಕುಮಾರ್ ಆಕಾಂಕ್ಷಿಗಳ ವಿವರ ಪಡೆದುಕೊಂಡರು. ಕೆಲವು ಕಂಪನಿಗಳ ಪ್ರತಿನಿಧಿಗಳೊಂದಿಗೂ ಮಾತನಾಡಿ ಉದ್ಯೋಗ, ಸಂಬಳ ಹೀಗೆ ವಿವಿಧ ಮಾಹಿತಿ ಪಡೆದುಕೊಂಡರು.

ಸಾವಿರ ಮಂದಿಗೆ ನೇಮಕಾತಿ ಪತ್ರ
ಉದ್ಯೋಗ ಮೇಳದಲ್ಲಿ ಸುಮಾರು 240 ಖಾಸಗಿ ಕಂಪನಿಗಳು ಪಾಲ್ಗೊಂಡಿದ್ದವು. 4 ಬ್ಲಾಕ್‌ಗಳನ್ನು ಮಾಡಿ ಆನ್‌ಲೈನ್ ಮತ್ತು ಆ್ಲೈನ್ ನೋಂದಣಿ ಮಾಡಿಕೊಳ್ಳುವ ಜತೆಗೆ ಅರ್ಹರಿಗೆ ಅಲ್ಲಿಯೇ ಆರ್ ಲೆಟರ್ ನೀಡಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು 10 ಸಾವಿರ ಮಂದಿ ಉದ್ಯೋಗ ಮೇಳದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಇವರಲ್ಲಿ ಒಂದು ಸಾವಿರ ಮಂದಿಗೆ ನೇಮಕಾತಿ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net