

ವಿಜಯವಾಣಿ ಸುದ್ದಿಜಾಲ ಬಿಡದಿ
ಸಿಕ್ಕ ಸಮಯ ಬಳಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಅಂಕ ಗಳಿಕೆಗೆ ಸೀಮಿತವಾಗದೆ ಉತ್ತಮ ಸಂಸ್ಕಾರ ಕಲಿತು ಪಾಲಕರ ಹೆಸರನ್ನು ಉಳಿಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಛತ್ರ ಗ್ರಾಮದ ಬಿಜಿಎಸ್ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಅರ್ಚಕರಹಳ್ಳಿಯ ಬಿಜಿಎಸ್ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸ್ವಸ್ತಿ-2024ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1996ರಲ್ಲಿ ದೀಕ್ಷೆ ಪಡೆದು ಮೊದಲು ಬಂದಿದ್ದು ಇದೇ ಬಾನಂದೂರು ಗ್ರಾಮಕ್ಕೆ. ಹಾಗಾಗಿ ಈ ನೆಲದ ಮಣ್ಣಿನ ಬಗ್ಗೆ ನನಗೆ ಅಪಾರ ಗೌರವವಿದೆ ಎಂದರು.
ಪಾಲಕರು ಮಕ್ಕಳ ಮೇಲೆ ನಂಬಿಕೆ ಇಟ್ಟು ಸಾಲಸೋಲ ಮಾಡಿ ವಿದ್ಯಾಭ್ಯಾಸ ಕೊಡಿಸುತ್ತಾರೆ. ಹಾಗಾಗಿ ನೀವು ಅವರ ನಂಬಿಕೆಗೆ ಯಾವುದೇ ಕಪ್ಪು ಚುಕ್ಕಿ ಬಾರದಂತೆ ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ನಿರ್ಮಾಣವಾಗಿ ಪಾಲಕರಿಗೆ ಹೆಸರು ತರಬೇಕೆಂದರು.
ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅವರು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಕಡೆಗೆ ಹೆಚ್ಚು ಒತ್ತು ನೀಡಿದ್ದರು. ಅವರು ಹಾಕಿಕೊಟ್ಟ ಹಾದಿಯಲ್ಲೇ ನಾವು ಸಾಗುತ್ತಿದ್ದೇವೆ. ಅವರ ಹುಟ್ಟೂರಿನಲ್ಲೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಸುಸಜ್ಜಿತವಾಗಿ ಕಾಲೇಜು ಪ್ರಾರಂಭಿಸಲಾಗುತ್ತಿದೆ ಎಂದರು.
ಜೀವನದಲ್ಲಿ ವಿದ್ಯೆಯೇ ದೊಡ್ಡದು. ಎಲ್ಲರ ಬಾಳನ್ನು ಸುಂದರ ಮಾಡುತ್ತದೆ. ವಿದ್ಯೆ ಕಲಿತರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು. ಶಾಲೆಯಲ್ಲಿ ಒಂದು ಮಗುವಿಗೆ ಸಿಗಬೇಕಾದ ಶಿಸ್ತು, ವಿನಯ, ನಡೆ, ನುಡಿ ಕಲಿಸುವ ಬಗ್ಗೆ ಬಾಲಗಂಗಾಧರನಾಥ ಸ್ವಾಮೀಜಿಗಳು ಸಂಕಲ್ಪ ತೊಟ್ಟು ಎಲ್ಲ ಕಡೆ ಮಠದ ಶಾಖೆಗಳನ್ನು ತೆರೆಯುವ ಕೆಲಸ ಮಾಡಿದ್ದರು ಎಂದರು.
ಅರ್ಚಕರಹಳ್ಳಿಯ ಬಿಜಿಎಸ್ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿ ಹಾಗೂ ನೀಟ್ ಪರೀಕ್ಷೆಯಲ್ಲಿ ಶಾಲೆಗೆ ಹಾಗೂ ಜಿಲ್ಲೆಗೆ ಹೆಸರು ತಂದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅರ್ಚಕರಹಳ್ಳಿಯ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಬಾಲಗಂಗಾಧರನಾಥ ಸ್ವಾಮೀಜಿಗಳ ಸಹೋದರ ಮರಿಸ್ವಾಮಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಿಇಒ ಡಾ. ಶಿವರಾಂ ರೆಡ್ಡಿ, ಮುಖಂಡರಾದ ಚಿಕ್ಕಣ್ಣಯ್ಯ, ಗಂಗಾಧರ್, ಉಮೇಶ್ ಸೇರಿ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.