

ಸುಭಾಸ ಧೂಪದಹೊಂಡ ಕಾರವಾರ: ಅಂಕೋಲಾದ ಕರಿ ಈಶಾಡಿಗೆ ಜಿಯಾಗ್ರಫಿಕಲ್ ಇಂಡಿಕೇಶನ್ (ಜಿಐ) ಪ್ರಮಾಣಪತ್ರ ಲಭ್ಯವಾಗಿದೆ. ಇದೇ ರೀತಿ ಜಿಲ್ಲೆಯ ಇನ್ನೂ ಹಲವು ವಿಶಿಷ್ಟ ಉತ್ಪನ್ನಗಳು ಜಿಯಾಗ್ರಫಿಕಲ್ ಸರ್ಟಿಫಿಕೇಶನ್‌ಗೆ ಕಾಯುತ್ತಿವೆ. ಕೆಲ ವರ್ಷಗಳ ಹಿಂದೆ ಶಿರಸಿಯ ಟಿಎಸ್‌ಎಸ್ ಸಂಸ್ಥೆಯ ಅಡಕೆ ಬೆಳೆಗೆ ಜಿಐ ಪ್ರಮಾಣಪತ್ರ ಪಡೆದುಕೊಂಡಿತ್ತು.
ಅದನ್ನು ಬಿಟ್ಟರೆ ಅಂಕೋಲಾ ಕರಿ ಈಶಾಡು ಈ ಇಂಡಿಕೇಶನ್ ಪಡೆದ ಜಿಲ್ಲೆಯ ಎರಡನೇ ಉತ್ಪನ್ನವಾಗಿದೆ.
ಹಂದಿಗೋಣದ ಸಿಹಿ ಈರುಳ್ಳಿ, ಜೊಯಿಡಾದ ಗಡ್ಡೆ, ಗೆಣಸುಗಳು, ಕುಮಟಾದ ಕಗ್ಗ ಭತ್ತ, ಮೆದಿನಿಯ ಸಣ್ಣಕ್ಕಿ, ಗೋಕರ್ಣದ ಮೆಣಸು, ಹೊನ್ನಾವರದ ವೀಳ್ಯದೆಲೆ ಮಂತಾದ ಬೆಳೆಗಳು ಆಯಾ ಊರಿನ ಹೆಸರಲ್ಲೇ ಪ್ರಸಿದ್ಧವಾಗಿವೆ ಅವುಗಳನ್ನು ಗುರುತಿಸಿ ಸಂರಕ್ಷಿಸುವ ಕೆಲಸವಾಗಬೇಕಿದೆ ಎಂಬುದು ಜಿಲ್ಲೆಯ ಪ್ರಾಜ್ಞರ ಅಭಿಪ್ರಾಯ.
ಹಂದಿಗೋಣದ ಸಿಹಿ ಈರುಳ್ಳಿ, ಕುಮಟಾದ ಕಗ್ಗ ಭತ್ತದ ತಳಿಗಳು ನಶಿಸುವ ಹಂತದಲ್ಲಿವೆ. ಇನ್ನು ಭಟ್ಕಳದ ಮಲ್ಲಿಗೆಗೆ ಉಡುಪಿ ಜಿಲ್ಲೆಯಲ್ಲಿ ಜಿಐ ಟ್ಯಾಗ್ ಲಭಿಸಿದೆ.
ಉತ್ತರ ಕನ್ನಡದಲ್ಲೂ ವಿಶಿಷ್ಟವಾಗಿರುವ ಅಪ್ಪೆಮಿಡಿಗೆ ಪಕ್ಕದ ಶಿವಮೊಗ್ಗೆ ಜಿಲ್ಲೆಯ ಸಾಗರದಲ್ಲಿ ಜಿಐ ಟ್ಯಾಗ್ ಲಭಿಸಿದೆ.
ಇನ್ನೂ ಜಿಲ್ಲೆಯ ಜನ ಎಚ್ಚೆತ್ತುಕೊಳ್ಳದಿದ್ದಲ್ಲಿ ಇಂಥ ಉಪ್ಪನ್ನಗಳು ಸಂಪೂರ್ಣವಾಗಿ ನಶಿಸಲಿವೆ ಅಥವಾ ಬೇರೆಯವರ ಪಾಲಾಗುವ ಆತಂಕವಿದೆ. ತೋಟಗಾರಿಕೆ, ಕೃಷಿ ಮುಂತಾದ ಇಲಾಖೆಗಳು ತಮ್ಮ ವ್ಯಾಪ್ತಿಯ ಬೆಳೆಗಳ ಬಗ್ಗೆ ಕನಿಷ್ಠ ದಾಖಲೀಕರಣವನ್ನು ಇಂದಿನಿಂದಲೇ ಮಾಡಬೇಕು ಎನ್ನುತ್ತಾರೆ ಪರಿಸರ ತಜ್ಞ ಶಿವಾನಂದ ಕಳವೆ.
ಯಾವುದೇ ವಸ್ತುವಿಗೆ ಜಿಯಾಗ್ರಫಿಕಲ್ ಇಂಡಿಕೇಶನ್ ಪಡೆದುಕೊಂಡಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಸಂಬAಧಪಟ್ಟ ಬೆಳೆ ಅಥವಾ ಉತ್ಪನ್ನದ ಕ್ಷೇತ್ರ ವಿಸ್ತರಣೆಗೆ, ಸಂರಕ್ಷಣೆಗೆ ಅನುದಾನ ಲಭ್ಯವಾಗಲಿದೆ. ಅಲ್ಲದೆ, ಬ್ರಾಂಡಿAಗ್ ಉಂಟಾಗುವುದರಿAದ ವಿಮಾನ ನಿಲ್ದಾಣಗಳಲ್ಲಿ ಮಾರಾಟಕ್ಕೆ ಅವಕಾಶ ದೊರೆಯಲಿದೆ. ವಿದೇಶಕ್ಕೆ ರಫ್ತಿಗೆ ಸುಲಭ ಅವಕಾಶ ದೊರೆಯಲಿದೆ. ಜಿಐ ಪ್ರದರ್ಶನಗಳಲ್ಲಿ ಈ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ದೊರೆಯಲಿದೆ ಎನ್ನುತ್ತಾರೆ ನಬಾರ್ಡ್ ಡಿಡಿಎಂ ರೇಜೀಸ್ ಇಮ್ಯಾನ್ಯುವಲ್.
ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಡಿ ಇರುವ ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್ಸ್, ಡಿಸೈನ್ಸ್ ಮತ್ತು ಡ್ರೇಡ್ ಮಾರ್ಕ್ಸ್ ವಿಭಾಗವು ಈ ಜಿಐ ಮಾನ್ಯತೆಯನ್ನು ನೀಡುತ್ತದೆ.
ಈ ಪ್ರಮಾಣಪತ್ರ ಪಡೆಯಲು ಇಲಾಖೆಗೆ ಭರಣ ಮಾಡಬೇಕಾದ ಶುಲ್ಕ ಅತಿ ಕಡಿಮೆ ಇದೆ. ಆದರೆ, ಅದಕ್ಕೆ ಬೇಕಾದ ದಾಖಲೆ ಕಲೆ ಹಾಕಲು ಸಾಕಷ್ಟು ಖರ್ಚು ಮಾಡಬೇಕಿದೆ.
ಜಿಐ ಪ್ರಮಾಣಪತ್ರ ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಕೆಯಾದ ನಂತರ ತಜ್ಞರು ಸ್ಥಳ ಪರಿಶೀಲನೆ ಮಾಡುವರು. ನಂತರ ಜಿಐ ಜರ್ನಲ್‌ನಲ್ಲಿ ಈ ಬಗ್ಗೆ ಜಾಹೀರಾತು ನೀಡಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು. ಅದರ ಬಗ್ಗೆ ಹೇಳಿಕೊಳ್ಳಲು ಅಹವಾಲು ಸಭೆ ನಡೆಸಲಾಗುವುದು.
ನಂತರ ಎಲ್ಲ ಸರಿ ಎನಿಸಿದಲ್ಲಿ ಜಿಐ ರಜಿಸ್ಟರ್‌ನಲ್ಲಿ ಉತ್ಪನ್ನದ ಬಗ್ಗೆ ದಾಖಲೆ ಮಾಡಿ ಪ್ರಮಾಣಪತ್ರ ನೀಡಲಾಗುವುದು.
ಆದರೆ ಯಾವುದಾದರೂ ಉತ್ಪನ್ನಕ್ಕೆ ಜಿಐ ಪ್ರಮಾಣಪತ್ರ ಬೇಕು ಎಂದರೆ ಕನಿಷ್ಠ ಶತಮಾನದ ಹಿಂದೆ ಉತ್ಪನ್ನ ಇರುವ ಬಗ್ಗೆ ಅಧಿಕೃತ ದಾಖಲೆಗಳು ಬೇಕಾಗುತ್ತವೆ.
ಅಂಕೋಲಾದ ಕರಿ ಈಶಾಡಿಗೆ ಜಿಐ ಟ್ಯಾಗ್ ಪಡೆಯಲು ಅರ್ಜಿ ಸಲ್ಲಿಕೆಗೆ ತೋಟಗಾರಿಕೆ ಇಲಾಖೆಯೇ ದಾಖಲೆಗಳನ್ನು ಒದಗಿಸಿತ್ತು. ರೈತ ಉತ್ಪಾದಕ ಕಂಪನಿಗೆ ನೆರವಾಗಿದ್ದು, ನಮ್ಮದೇ ಇಲಾಖೆ. ಇದೇ ಅನುಭವದ ಆಧಾರದ ಮೇಲೆ ಮುಂದೆ ಇನ್ನೂ ಕೆಲವು ಉತ್ಪನ್ನಗಳಿಗೆ ಜಿಐ ಟ್ಯಾಗ್ ಪಡೆಯಲು ಶೀಘ್ರ ಅರ್ಜಿ ಸಲ್ಲಿಸಲಿದ್ದೇವೆ. ಆದರೆ, ಅದಕ್ಕೆ ಪ್ರತ್ಯೇಕ ಅನುದಾನ ನಮ್ಮ ಇಲಾಖೆಯಲ್ಲಿಲ್ಲ.ಬಿ.ಪಿ.ಸತೀಶತೋಟಗಾರಿಕೆ ಇಲಾಖೆ ಉಪ ನಿರ್ದೇಶಕ