

ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಆ. 20ರಂದು ಜ್ಞಾನಕಾಶಿ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ತಿಳಿಸಿದರು.
ನಗರದ ಗುರುಭವನದಲ್ಲಿ ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಲಯದ ಸುಮಾರು 250 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದುಹಾಗೂ ನೂತನ ಸಚಿವರು ಮತ್ತು ಶಾಸಕರನ್ನು ಸನ್ಮಾನಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭಾನುವಾರ ಬೆಳಗ್ಗೆ 11.30ಕ್ಕೆ ಶಾಸಕ ಡಾ.ಶಾಮನೂರು ಶಿವಂಕರಪ್ಪ ಉದ್ಘಾಟಿಸುವರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಅಧ್ಯಕ್ಷತೆ ವಹಿಸುವರು.
ಶಾಸಕರಾದ ಬಿ. ದೇವೇಂದ್ರಪ್ಪ, ಬಿ.ಪಿ. ಹರೀಶ್, ಡಿ.ಜಿ. ಶಾಂತನಗೌಡ, ಶಿವಗಂಗಾ ಬಸವರಾಜ್, ಕೆ.ಎಸ್. ಬಸವಂತಪ್ಪ, ಕರವೇ ಉದ್ಯಮದಾರ ಘಟಕದ ಶ್ರೀನಿವಾಸ್ ಚಿನ್ನಿಕಟ್ಟೆ ಹಾಗೂ ಓ. ಮಹೇಶ್ವರಪ್ಪ ಅವರನ್ನು ಸನ್ಮಾನಿಸಲಾಗುವುದು. ಡಿಡಿಪಿಐ ಜಿ. ಕೊಟ್ರೇಶ್ ಇತರರು ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಇತಿಹಾಸ ತಜ್ಞ ಎ.ಎಸ್. ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಹಾಗೂ ದೊಡ್ಡಬಾತಿ ತಪೋವನ ಸಮೂಹ ಸಂಸ್ಥೆಗಳ ಛೇರ್ಮನ್ ಡಾ.ಶಶಿಕುಮಾರ್ ಮೆಹರ‌್ವಾಡೆ ಅವರಿಗೆ ಪರಿಸರ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಕರವೇ ಪದಾಧಿಕಾರಿಗಳಾದ ವಾಸುದೇವ ರಾಯ್ಕರ್, ಮಲ್ಲಿಕಾರ್ಜುನ್, ಬಸಮ್ಮ, ಶಾಂತಮ್ಮ, ಸಂತೋಷ್, ಲೋಕೇಶ್, ಗೋಪಾಲ್ ದೇವರಮನೆ ಸುದ್ದಿಗೋಷ್ಠಿಯಲ್ಲಿದ್ದರು.