

ಚಿಕ್ಕಬಳ್ಳಾಪುರ : ಎದುರಾಗುವ ಸಂಕಷ್ಟದ ಸವಾಲುಗಳ ನಡುವೆಯೂ ಉನ್ನತ ಶಿಕ್ಷಣ ಪಡೆಯಲು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅಜೀಂ ಪ್ರೇಮ್‌ಜೀ ಫೌಂಡೇಷನ್ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ವಾಣ್ ಮತ್ತು ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಾತನಾಡಿದರು.
ವಿದ್ಯಾರ್ಥಿಗಳ ಸರ್ವತೋಮುಖ ಅಭಿವದ್ಧಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಸಂಘ ಸಂಸ್ಥೆಗಳೂ ಇದಕ್ಕೆ ಕೈಜೋಡಿಸಿವೆ. ಇವುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಓದಿನ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ತೊಡಗಿಸಿಕೊಳ್ಳುವುದರಿಂದ ಪ್ರತಿಭೆ ಮತ್ತು ಕೌಶಲ ವೃದ್ಧಿಯಾಗುತ್ತದೆ. ಪ್ರಸ್ತುತ ತಂತ್ರಜ್ಞಾನದ ಯುಗದಲ್ಲಿ ಪೈಪೋಟಿ ಹೆಚ್ಚಿದೆ. ಇದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಸಜ್ಜಾಗಬೇಕು. ಚಿಕ್ಕ ವಯಸ್ಸಿನಿಂದಲೇ ಮಾತೃಭಾಷೆಯ ಜತೆಗೆ ಆಂಗ್ಲಭಾಷೆಯಲ್ಲಿ ವಾತನಾಡುವುದನ್ನು ಕಲಿಯಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಆಕರ್ಷಕ ಕಲಿಕಾ ವಾತಾವರಣ ಇದೆ. ಅನೇಕ ಪ್ರತಿಭಾವಂತರು ಬೆಳಕಿಗೆ ಬರುತ್ತಿದ್ದಾರೆ. ಮುಂಬರುವ ದಿನಗಳಲ್ಲೂ ಪಾಲಕರಲ್ಲಿ ಖಾಸಗಿ ಶಾಲೆಗಳ ಬಗ್ಗೆ ವ್ಯಾಮೋಹ ಕಡಿಮೆ ಆಗುವ ರೀತಿಯಲ್ಲಿ ಶಿಕ್ಷಕರು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಉಪ ವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್. ಮಹೇಶ್ ಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಪಿ. ಬೈಲಾಂಜಿನಪ್ಪ, ನಗರಾಭಿವದ್ಧಿ ಪ್ರಾಧಿಕಾರದ ಕೆ.ಎನ್. ಕೇಶವ ರೆಡ್ಡಿ, ದೊಡ್ಡ ಪೈಲಗುರ್ಕಿ ಗ್ರಾಪಂ ಅಧ್ಯಕ್ಷೆ ಗಾಯತ್ರಿ ಸತೀಶ್, ಉಪಾಧ್ಯಕ್ಷ ನಾಗರಾಜು, ಎಸ್‌ಡಿಎಂಸಿ. ಅಧ್ಯಕ್ಷ ರೆಡ್ಡಪ್ಪ ಮತ್ತಿತರರು ಇದ್ದರು.
ಕನ್ನಡ ಭವನಕ್ಕೆ ₹6.2 ಕೋಟಿ
ಜಿಲ್ಲಾ ಕೇಂದ್ರದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ವಾಣ ಹಂತದಲ್ಲಿರುವ ಕನ್ನಡ ಭವನದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಬಾಕಿ ಇರುವ 6.25 ಕೋಟಿ ರೂ. ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಸಚಿವರು ತಿಳಿಸಿದರು. ಸಚಿವ ಸಂಪುಟ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ. ಸೌಂಡ್ ಸಿಸ್ಟಂ, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ, ಹವಾನಿಯಂತ್ರಣ ವ್ಯವಸ್ಥೆ ಸೇರಿ ಇತರ ಒಳಾಂಗಣ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಯೋಜನಾ ಅಭಿಯಂತರರಿಗೆ ಹಾಗೂ ಗುತ್ತಿದಾರರಿಗೆ ಸೂಚಿಸಲಾಗಿದೆ ಎಂದರು.
ಮೂಲಸೌಕರ್ಯಕ್ಕೆ ಮನವಿ
ರೆಡ್ಡಿಗೊಲ್ಲವಾರಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಮೂಲಸೌಕರ್ಯ ಒದಗಿಸುವಂತೆ ಮುಖ್ಯಶಿಕ್ಷಕಿ ವಿನುತಾ ಸಚಿವರಿಗೆ ಮನವಿ ಮಾಡಿದರು. ಶಾಲೆಯು 4.10 ಎಕರೆ ಜಾಗದಲ್ಲಿ ನಡೆಯುತ್ತಿದ್ದು, 114 ಮಕ್ಕಳು ವಿದ್ಯಾಭ್ಯಾಸ ವಾಡುತ್ತಿದ್ದಾರೆ. ಶಾಲಾ ಆವರಣ ನಿರ್ವಾಣ ಹಾಗೂ ಕ್ರೀಡಾ ಮೈದಾನ ಅಭಿವದ್ಧಿಗೆ ಅನುದಾನ ಮಂಜೂರು, ಶಾಲಾ ಅವಧಿಗೆ ಪೂರಕವಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದರು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳೊಂದಿಗೆ ಬಾಸ್ಕೆಟ್‌ಬಾಲ್ ಆಟವಾಡಿ, ಸೆಲ್ಫಿ ತೆಗೆಸಿಕೊಂಡರು.
ಪೌಷ್ಟಿಕ ಆಹಾರ ವಿತರಣೆ
ರಾಜ್ಯ ಸರ್ಕಾರ ಪ್ರಸ್ತುತ ವಾರದಲ್ಲಿ ಎರಡು ದಿನ ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುತ್ತಿದ್ದು, ಇದೀಗ ಅಜೀಂ ಪ್ರೇಮ್ ಜೀ ಫೌಂಡೇಷನ್ ಸಹಕಾರದೊಂದಿಗೆ ವಾರದ ಆರು ದಿನಗಳಿಗೂ ವಿಸ್ತರಿಸಲಾಗಿದೆ. ಇದಕ್ಕೆ ವಾರ್ಷಿಕವಾಗಿ 1500 ಕೋಟಿ ರೂ. ಅನುದಾನದ ಅಗತ್ಯವಿದ್ದು, ಮುಂಬರುವ 3 ವರ್ಷಗಳವರೆಗೆ ಪೌಷ್ಠಿಕ ಆಹಾರವನ್ನು ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ.
77,691 ಲಾನುಭವಿಗಳು
ಜಿಲ್ಲೆಯಲ್ಲಿ 1601 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಪೈಕಿ 1ರಿಂದ 10ನೇ ತರಗತಿವರೆಗೆ 77,691 ವಿದ್ಯಾರ್ಥಿಗಳು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಪೈಕಿ ಪೌಷ್ಟಿಕ ಆಹಾರವಾಗಿ 66194 ಮಕ್ಕಳು ಬೇಯಿಸಿದ ಮೊಟ್ಟೆ, 7326 ಮಕ್ಕಳು ಬಾಳೆಹಣ್ಣು ಮತ್ತು 4171 ವಿದ್ಯಾರ್ಥಿಗಳು ಶೇಂಗಾ ಚಿಕ್ಕಿ ಪಡೆಯುತ್ತಿದ್ದಾರೆ.
ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು ಸರ್ಕಾರ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಪ್ರಾಥಮಿಕ ಶಾಲಾ ಪೂರ್ವ ಮಕ್ಕಳು, 1ರಿಂದ 10ನೇ ತರಗತಿ ವರೆಗೆ ವಿದ್ಯಾರ್ಥಿಗಳಿಗೆ 150 ಮಿ.ಲೀ. ಹಾಲನ್ನು ವಾರದ 5 ದಿನ ನೀಡಲಾಗುತ್ತಿದೆ. ಇದರ ಜತೆಗೆ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಬೇಯಿಸಿದ ಮೊಟ್ಟೆಯನ್ನು, ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣು ಮತ್ತು ಶೇಂಗಾ ಚಿಕ್ಕಿ ನೀಡಲಾಗುತ್ತಿತ್ತು.