ಜಿಬಿಐಟಿ ಭೂಸ್ವಾಧಿನ ಮಾರ್ಚ್​ ಅಂತ್ಯಕ್ಕೆ ಪರಿಹಾರ

GBID meeting
Published on

* ಜಿಲ್ಲಾಧಿಕಾರಿ ಯಶವಂತ್​ ವಿ.ಗುರುಕರ್​ ಮಾಹಿತಿ

* ಅಪಪ್ರಚಾರಕ್ಕೆ ಕಿವಿಗೊಡದಂತೆ ರೈತರಿಗೆ ಮನವಿ

ರಾಮನಗರ

ಗ್ರೇಟರ್​ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನಾ ಪ್ರದೇಶದ 9 ಗ್ರಾಮಗಳಲ್ಲಿ ಜಂಟಿ ಅಳತೆ ಪ್ರಮಾಣೀಕರಣ(ಜೆಎಂಸಿ) ಸೇರಿದಂತೆ ಭೂ ಸ್ವಾಧಿನದ ಎಲ್ಲ ಪ್ರಕ್ರಿಯೆಗಳನ್ನು 2026ರ ಮಾರ್ಚ್​ ಅಂತ್ಯದೊಳಗೆ ಮುಗಿಸಿ ಜಮೀನು ಮಾಲೀಕರಿಗೆ ಪರಿಹಾರ ಪಾವತಿಸಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ್​ ವಿ.ಗುರುಕರ್​ ತಿಳಿಸಿದರು.

ಜಿಬಿಐಟಿ ಯೋಜನಾ ಪ್ರದೇಶದ ಜಮೀನು ಮಾಲೀಕರಿಗೆ ಭೂ ಪರಿಹಾರ ನೀಡುವ ಸಂಬಂಧ ಗುರುವಾರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಬಿಐಟಿ ಯೋಜನೆಗೆ ಸ್ವಾಧಿನವಾಗಲಿರುವ ಭೂಮಿಗೆ ಒಂದು ವಾರದೊಳಗೆ ಪರಿಹಾರ ದರ ನಿಗದಿಪಡಿಸಲಾಗುವುದು. ಈ ವಿಚಾರದಲ್ಲಿ ಯಾರೂ ಅಪಪ್ರಚಾರಕ್ಕೆ ಕಿವಿಗೊಡುವುದು ಬೇಡ ಎಂದರು.

ಸ್ವಾಧಿನವಾಗಲಿರುವ ಜಮೀನಿಗೆ ಪ್ರತಿ ಎಕರೆಗೆ ಕನಿಷ್ಠ ಮತ್ತು ಗರಿಷ್ಠ ಪರಿಹಾರ ಎಷ್ಟು ಸಿಗಲಿದೆ ಎನ್ನುವುದನ್ನು ಡಿಸಿಎಂ ಡಿ.ಕೆ.ಶಿವಕುಮಾರ್​ ಅವರು ಈಗಾಗಲೇ ತಿಳಿಸಿದ್ದಾರೆ. ಆದರೂ, ಭೂಮಿ ನೋಂದಣಿ ಮತ್ತು ಮುದ್ರಾಂಕ (ಎಸ್​.ಆರ್​) ಮೌಲ್ಯ ಆಧರಿಸಿ ಕಡಿಮೆ ಪರಿಹಾರ ಸಿಗಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.  ಸದ್ಯ ಜಮೀನಿನಲ್ಲಿ ಆ್ಯಪ್​ ಆಧರಿಸಿ ಜೆಎಂಸಿ(ಜಂಟಿ ಸರ್ವೇ) ನಡೆಯುತ್ತಿದೆ. ನಿತ್ಯ 90 ಎಕರೆ ಪ್ರಮಾಣೀಕರಿಸಲಾಗುತ್ತಿದ್ದು, ಮೌಲ್ಯಮಾಪನವೂ ನಡೆಯುತ್ತಿದೆ. 2026ರ ಮಾರ್ಚ್​ ಮೊದಲ ವಾರದೊಳಗೆ ಸರ್ವೇ ಪೂರ್ಣಗೊಳ್ಳಲಿದ್ದು, ನಂತರ ಪರಿಹಾರ ಪಾವತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಾರುಕಟ್ಟೆ ದರ

ಕೇಂದ್ರ ಸರ್ಕಾರ 2013ರಲ್ಲಿ ಜಾರಿಗೆ ತಂದಿರುವ ಭೂ ಸ್ವಾಧಿನ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್​ನಿರ್ಮಾಣ ಕಾಯ್ದೆ&2013ರಂತೆಯೇ ಪರಿಹಾರ ನೀಡಲಾಗುತ್ತದೆ. ಯೋಜನಾ ಪ್ರದೇಶದಲ್ಲಿ ಎಸ್​.ಆರ್​ ಮೌಲ್ಯಕ್ಕೆ ಬದಲಾಗಿ ಇರುವ ಭೂಮಿಯ ವಹಿವಾಟು ದರ ಆಧರಿಸಿ ಮೂರು ಪಟ್ಟು ಪರಿಹಾರ ನೀಡಲಾಗುವುದು. ಆಗ ರೈತರು ನಿರೀೆ ಮಾಡದಷ್ಟು ಪರಿಹಾರ ಸಿಗಲಿದೆ. ಒಂದೆ ಬಾರಿ ಅಷ್ಟೂ ಮೊತ್ತವನ್ನು ಪಾವತಿಸಲಾಗುವುದು(ಒನ್​ ಟೈಮ್​ ಸೆಟ್ಲ್​ಮೆಂಟ್​) ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಭೂ ಮಾಲೀಕರ ಹಿತ

ಯೋಜನೆಯ ಪಾಲುದಾರರಾಗುವ ಜಮೀನು ಮಾಲೀಕರಿಗೆ ಎಲ್ಲೋ ಮೂಲೆಯಲ್ಲಿ ನಿವೇಶನ ಕೊಡುತ್ತಾರೆ, ಮುಖ್ಯ ಸ್ಥಳಗಳಲ್ಲಿ ಕೊಡುವುದಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಅದು ಸತ್ಯವಲ್ಲ. ಮಾಸ್ಟರ್​ ಪ್ಲಾನ್​ ಆದ ಬಳಿಕ, ಯೋಜನಾ ಪ್ರದೇಶವನ್ನು ವಿವಿಧ ವಲಯಗಳನ್ನಾಗಿ ವಿಂಗಡಿಸಲಾಗುತ್ತದೆ. ಆ ವಲಯದಲ್ಲಿ ಮಾಲೀಕರಿಗೆ ವಸತಿ ಮತ್ತು ವಾಣಿಜ್ಯ ನಿವೇಶನಗಳನ್ನು ಹಂಚಲಾಗುವುದು ಎಂದು ಯಶವಂತ್​ ವಿ.ಗುರುಕರ್​ ತಿಳಿಸಿದರು.

ಮಧ್ಯಾಹ್ನ 12.15ಕ್ಕೆ ಶುರುವಾದ ಮೊದಲ ಬ್ಯಾಚ್​ನ ರೈತರ ಸಭೆಯಲ್ಲಿದ್ದ ಎಲ್ಲರೂ ಯೋಜನೆಗೆ ಬೆಂಬಲ ಸೂಚಿಸಿದರು. ಜತೆಗೆ ಪರಿಹಾರ ಹೆಚ್ಚಳ ಸೇರಿ ಯೋಜನೆ ಅನುಷ್ಠಾನಕ್ಕೆ ಪೂರಕವಾಗಿ ಕೆಲ ಸಲಹೆಗಳನ್ನು ನೀಡಿದರು. ಪರಿಹಾರ ಮತ್ತು ವಾರ್ಷಿಕ ಭತ್ಯೆ ಹೆಚ್ಚಳ ಮಾಡಬೇಕೆಂಬ ಒತ್ತಾಯಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಜಿಬಿಡಿಎ ಹೆಚ್ಚುವರಿ ಆಯುಕ್ತ ಮಾರುತಿ ಪ್ರಸನ್ನ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್​.ಚಂದ್ರಯ್ಯ, ಉಪ ವಿಭಾಗಾಧಿಕಾರಿ ಬಿನೋಯ್​, ರಾಮನಗರ ತಹಸೀಲ್ದಾರ್​ ತೇಜಸ್ವಿನಿ, ಜಿಬಿಡಿಎ ಹಾಗೂ ಜಿಲ್ಲಾಡಳಿತ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಶೇ.80ರಷ್ಟು ಮಂದಿ ಒಪ್ಪಿಗೆ

ಜಿಬಿಡಿಎ ನಿರ್ಮಿಸಲು ಉದ್ದೇಶಿಸಿರುವ ಟೌನ್​ಶಿಪ್​ನ ಯೋಜನಾ ಪ್ರದೇಶದಲ್ಲಿ ಒಟ್ಟು 10,452 ಹಿಸ್ಸಾಗಳಿವೆ (ಪ್ಲಾಟ್​ಗಳು). ಆ ಪೈಕಿ ಇಂದು 1,466 ಹಿಸ್ಸಾಗಳ ಮಾಲೀಕರು ಗುರುವಾರ ಲಿಖಿತವಾಗಿ ಆೇಪಣೆ ಸಲ್ಲಿಸಿದ್ದಾರೆ. ಅಂದರೆ, ಒಟ್ಟು ಹಿಸ್ಸಾಗಳ ಪೈಕಿ ಶೇ.12ರಷ್ಟು ಮಾತ್ರ ಆೇಪಣೆ ಸ್ವೀಕಾರವಾಗಿದೆ. ಭೂ ಸ್ವಾಧಿನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ಆೇಪಣೆ ಆಹ್ವಾನಿಸಿದಾಗ ಒಟ್ಟು 6,200 ಜಮೀನು ಮಾಲೀಕರ ಪೈಕಿ 1,190 ಮಂದಿ ಭೂ ಸ್ವಾಧಿನ ಕೈ ಬಿಡುವಂತೆ ಆೇಪಣೆ ಸಲ್ಲಿಸಿದ್ದರು. ಆೇಪಣೆಗಳ ಕುರಿತು ಮಾಲೀಕರನ್ನು ವಿಚಾರಿಸಿದಾಗ ಅದರಲ್ಲಿ 240 ಜನ ಆೇಪಣೆ ಹಿಂಪಡೆದು ಪರಿಹಾರ ಪಡೆಯಲು ಲಖಿತ ರೂಪದಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಅಂದರೆ, ಒಟ್ಟಾರೆ ಶೇ.80ರಷ್ಟು ಜನ ಯೋಜನೆಗೆ ಒಪ್ಪಿದ್ದಾರೆ ಎಂದರ್ಥ ಎಂದು ಜಿಲ್ಲಾಧಿಕಾರಿ ಯಶವಂತ್​ ವಿ.ಗುರುಕರ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net