

ಇಂದಿನಿಂದ ಜಂಟಿ ಅಳತೆ ಪ್ರಕ್ರಿಯೆ ಆರಂಭ
* ಎಐ ಸಿಟಿ ನಿರ್ಮಾಣಕ್ಕೆ ಟೊಂಕ ಕಟ್ಟಿದ ಸರ್ಕಾರ
ಗಂಗಾಧರ್ ಬೈರಾಪಟ್ಟಣ, ರಾಮನಗರ
ದೇಶದ ಮೊದಲ ಎಐ ಸಿಟಿ (ಕೃತಕ ಬುದ್ಧಿಮತ್ತೆ ನಗರ) ನಿರ್ಮಾಣದತ್ತ ಹೆಜ್ಜೆಯಿಟ್ಟಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಭೂ ಸ್ವಾಧೀನ ಪಡಿಸಿಕೊಳ್ಳುವ ರೈತರಿಗೆ ಬಂಪರ್ ನೆರವು ನೀಡಲು ಮುಂದಾಗಿದೆ.
ಕೃತಕ ಬುದ್ಧಿಮತ್ತೆ(ಎಐ) ನಗರ ನಿರ್ಮಾಣದಿಂದಾಗಿ ವ್ಯಾಪಾರ ಮತ್ತು ಆರ್ಥಿಕತೆಗೆ ಉತ್ತೇಜನ, ಉದ್ಯೋಗಾವಕಾಶಗಳು, ಕೌಶಲ ಕೇಂದ್ರದ ಸ್ಥಾಪನೆ, ಬೆಂಗಳೂರು ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜತೆಗೆ, ಜೀವನಮಟ್ಟ ಸುಧಾರಣೆಯ ಗುರಿಯನ್ನು ಸರ್ಕಾರ ಹೊಂದಿದೆ. ಇದರ ನಡುವೆ ಇಂದಿನಿಂದ (ಸೆ.11) ಜೆಎಂಸಿ (ಜಂಟಿ ಅಳತೆ ಪ್ರಮಾಣಪತ್ರ) ಆರಂಭಗೊಳ್ಳಲಿದ್ದು, ಇದರಲ್ಲಿ ಭೂ ಮಾಲೀಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸುವ ಜತೆಗೆ, ರೈತರು ಭೂ ದಾಖಲೆಗಳಿಗೆ ಅಲೆದಾಡುವುದನ್ನು ತಪ್ಪಿಸುವ ಕೆಲಸಕ್ಕೂ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ.
ಸಾಮಾನ್ಯವಾಗಿ ಭೂ ಸ್ವಾಧೀನ ಪ್ರಕ್ರಿಯೆ ಭೂ ಮಾಲೀಕರನ್ನು ಹೈರಾಣಾಗಿಸುತ್ತದೆ. ಆದರೆ ಜಿಬಿಡಿಎ ಕೈಗೊಂಡಿರುವ ಸ್ವಾಧೀನ ಪ್ರಕ್ರಿಯೆ ಕಾಗದ ರಹಿತವಾಗಿರಲಿದೆ. ಈಗಾಗಲೇ ಸುಮಾರು 10 ಸಾವಿರ ಹಿಸ್ಸಾಗಳಿಗೆ ಸಂಬಂಧಿಸಿದಂತೆ 4.39 ಲಕ್ಷ ಭೂ ದಾಖಲೆಗಳು ಮತ್ತು 19 ಸಾವಿರ ಕಡತಗಳನ್ನು ಸ್ಕಾೃನ್ ಮಾಡಿಕೊಂಡು, ಹಿಸ್ಸಾವಾರು ಮಾಹಿತಿ ಸಂಗ್ರಹ ಮಾಡಿಕೊಂಡಿದೆ. ಜತೆಗೆ ಇಸಿ ಪಡೆಯಲು ತಗಲುವ ವೆಚ್ಚವನ್ನು ಪ್ರಾಧಿಕಾರವೇ ನೀಡಲಿದೆ. ರೈತರು ಆಧಾರ್ ಸಂಖ್ಯೆ ನೀಡಿದರೆ, ನಿಗದಿಯಾಗುವ ಪರಿಹಾರ ಮೊತ್ತವೂ ರೈತರು ಒಪ್ಪಿಗೆ ನೀಡುವ ಖಾತೆಗೆ ಜಮೆ ಆಗಲಿದೆ.
ಈಗಾಗಲೇ 2013ರ ಭೂ ಸ್ವಾಧೀನ ಕಾಯ್ದೆಯಂತೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿರುವ ಪ್ರಾಧಿಕಾರ ಕನಿಷ್ಠ 1.50 ಕೋಟಿ ರೂ.ನಿಂದ 3 ಕೋಟಿ ರೂ.ವರೆಗೂ ಪರಿಹಾರ ನೀಡಲಿದೆ. ಪರಿಹಾರ ಮೊತ್ತ ಪಡೆಯಲು ಇಚ್ಛಿಸದೇ ಅಭಿವೃದ್ಧಿ ಪಡಿಸಿದ ಭೂಮಿ ಪಡೆಯಲು ಬಯಸುವ ಮಾಲೀಕರಿಗೆ 50: 50 ಅನುಪಾತದಲ್ಲಿ ವಸತಿ ನಿವೇಶನ ಹಾಗೂ 55:45 ಅನುಪಾತದಲ್ಲಿ ವಾಣಿಜ್ಯ ನಿವೇಶನವನ್ನು ನೀಡಲಿದೆ.
ಇನ್ನು ಭೂ ಮಾಲಿಕರಿಗೆ ತೊಂದರೆ ಆಗದಂತೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಪರಿಹಾರ ನೀಡುವರೆಗೂ ಅಥವಾ ಅಭಿವೃದ್ಧಿಪಡಿಸಿದ ಜಾಗ ಹಸ್ತಾಂತರಿಸುವವರೆಗೂ ಜೀವನೋಪಾಯ ಭತ್ಯೆಯನ್ನು ವಾರ್ಷಿಕವಾಗಿ ನೀಡಲಿದೆ. ಖುಷ್ಕಿ ಭೂಮಿಗೆ ಎಕರೆಗೆ 30 ಸಾವಿರ ರೂ., ತರಿ ಭೂಮಿಗೆ 40 ಸಾವಿರ ರೂ., ಭಾಗಾಯ್ತಕ್ಕೆ 50 ಸಾವಿರ ರೂ. ಮತ್ತು ಭೂ ರಹಿತರಿಗೆ 25 ಸಾವಿರ ರೂ. ಪರಿಹಾರ ದೊರೆಯಲಿದೆ.
ಹಳ್ಳಿಗಳ ಅಭಿವೃದ್ಧಿಯು ಯೋಜನೆ ಮುಖ್ಯ ಉದ್ದೇಶವನ್ನಾಗಿ ಮಾಡಲಾಗಿದೆ. ಇದರಿಂದ ಹಳ್ಳಿಯ ಸುತ್ತಮುತ್ತ 50 ಮೀ. ರಿಂಗ್ ರಸ್ತೆ, ಕರ್ನಾಟಕ ಪಬ್ಲಿಕ್ ಶಾಲಾ ಸೌಲಭ್ಯ, ನವೀಕರಿಸಿದ ಆಸ್ಪತ್ರೆ, ಗ್ರಾಮಗಳಿಗೆ ಒಳಚರಂಡಿ ವ್ಯವಸ್ಥೆ, ಎಲ್ಲ ಋತುಮಾನದ ಉತ್ತಮ ರಸ್ತೆಗಳು, ಭೂಗತ ವಿದ್ಯುತ್ ಕೇಬಲ್‌ಗಳು, ಆಟದ ಮೈದಾನ, ಉದ್ಯಾನಗಳು, ಸರ್ಕಾರಿ ಕಚೇರಿ ಮತ್ತು ಸೇವಾ ಕೇಂದ್ರಗಳಿಗೆ ಜಾಗ, ಧಾರ್ಮಿಕ ಸ್ಥಳದ ಅಭಿವೃದ್ಧಿ, ಹಳ್ಳಿಯ ಚುಟುವಟಿಕೆಗಳಿಗೆ ಬಯಲು ಜಾಗ, ಶವ ಸಂಸ್ಕಾರಕ್ಕೆ ಜಾಗ ಲಭಿಸಲಿದೆ. ಜತೆಗೆ, ಈ ಯೋಜನೆಯಲ್ಲಿ ರೈತರನ್ನು ಯೋಜನೆಯ ಪಾಲುದಾರರನ್ನಾಗಿಸಲಾಗಿದೆ.
ಇನ್ನು ಸ್ವಾಧೀನಗೊಳ್ಳುವ ಜಮೀನಿನಲ್ಲಿರುವ ಮರಗಿಡಗಳಿಗೂ ಪರಿಹಾರ ನೀಡಲು ಪ್ರಾಧಿಕಾರ ಮುಂದಾಗಿದೆ. ತೋಟಗಾರಿಕೆ ಮತ್ತು ಅರಣ್ಯ ಇಲಾಖೆ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ನಿಗದಿ ಮಾಡುವ ಪರಿಹಾರ ಮೊತ್ತವನ್ನು ಪ್ರಾಧಿಕಾರ ನೀಡಲಿದೆ. ತೆಂಗಿಗೆ ಪ್ರತಿ ಮರಕ್ಕೆ ಕನಿಷ್ಠ 25 ಸಾವಿರ ಗರಿಷ್ಠ 40 ಸಾವಿರ ರೂ., ಮಾವಿಗೆ 45-64 ಸಾವಿರ ರೂ., ಅಡಕೆಗೆ 6-9 ಸಾವಿರ ರೂ., ಸಪೋಟಾಗೆ 25 -40 ಸಾವಿರ ರೂ., ಹುಣಸೆಗೆ 45-60 ಸಾವಿರ ರೂ., ಹಲಸಿಗೆ 25-40 ಸಾವಿರ ರೂ. ಪರಿಹಾರ ನೀಡಲಿದೆ.
ಇನ್ನು ಅರ್ಹ ಬಗರ್ ಹುಕುಂ ಸಾಗುವಳಿ ಅಡಿ 50/53 ಅಡಿ ಅರ್ಜಿ ಹಾಕಿರುವ ರೈತರಿಗೆ ಪ್ರತಿ ಎಕರೆಗೆ ಒಂದು ನಿವೇಶನ, ಯೋಜನಾ ಪ್ರದೇಶದ ನಿವೇಶನ ರಹಿತರಿಗೆ ವಸತಿ ಇಲಾಖೆಯಿಂದಲೇ ಮನೆ ನಿರ್ಮಿಸಿಕೊಂಡುವ ಕಾರ್ಯವನ್ನು ಪ್ರಾಧಿಕಾರ ಮಾಡಲಿದೆ. ಒಟ್ಟಾರೆ ಯೋಜನೆ ಜಾರಿಗೆ ಟೊಂಕಕಟ್ಟಿ ನಿಂತಿರುವ ಸರ್ಕಾರ ಭೂ ಮಾಲೀಕರಿಗೆ ಬಂಪರ್ ಆಫರ್‌ಗಳನ್ನು ನೀಡಿದೆ.
ಜಂಟಿ ಅಳಕೆ ಆರಂಭಗೊಳ್ಳಲಿದ್ದು, ನಂತರ ಪ್ರತಿ ಗ್ರಾಮದಲ್ಲಿ ಶಾಸಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಭೆ ನಡೆಸಿ ಪರಿಹಾರ ದರ ನಿಗದಿ ಮಾಡಲಿದ್ದಾರೆ. ರೈತರು ಮತ್ತು ಭೂ ಮಾಲೀಕರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಎಲ್ಲ ರೀತಿಯಿಂದಲೂ ನೆರವು ನೀಡಲಿದೆ.ಗಾಣಕಲ್ ನಟರಾಜ್ಅಧ್ಯಕ್ಷ, ಜಿಬಿಡಿಎ