ಶೈಕ್ಷಣಿಕ ಸಮೀಕ್ಷೆಗೆ ಮೊದಲ ದಿನವೇ ಸತ್ವ ಪರೀಕ್ಷೆ

GBA
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಗ್ರೇಟರ್​ ಬೆಂಗಳೂರು ಪ್ರಧಿಕಾರ (ಜಿಬಿಎ) ಆಡಳಿತ ವ್ಯಾಪ್ತಿಯಲ್ಲಿ ಶನಿವಾರದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾಗಿದ್ದು, ಮೊದಲ ದಿನವೇ ಹಲವು ಗೊಂದಲುಗಳು ಏರ್ಪಟ್ಟಿವೆ. ಸಮೀಕ್ಷಾದಾರರು ಸಂಬಂಧಪಟ್ಟ ಉಸ್ತುವಾರಿ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. 300 ಮನೆಗಳನ್ನು ಗಣತಿ ಮಾಡುವ ಗುರಿ ಪ್ರತಿ ಸಮೀಕ್ಷಾದಾರರಿಗೂ ನಿಗದಿಪಡಿಸಲಾಗಿದ್ದು, ಸಮೀೆ ನಡೆಸಬೇಕಾದ ಸ್ಥಳ ಹಾಗೂ ಸಿಬ್ಬಂದಿ ವಾಸಸ್ಥಳ ದೂರದಲ್ಲಿರುವುದು, ಅನಾರೋಗ್ಯ, ಗಂಭೀರ ಸಮಸ್ಯೆಗಳಿಂದ ಬಳಲುವವರಿಗೂ ವಿನಾಯಿತಿ ನೀಡದಿರುವ ಬಗ್ಗೆ ಸಿಬ್ಬಂದಿ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನ 5 ಪಾಲಿಕೆಗಳಲ್ಲೂ ಕೇಂದ್ರ ಸ್ಥಾನದಲ್ಲಿ ಮಸ್ಟರಿಂಗ್​ ಸೆಂಟರ್​ ಆರಂಭಿಸಲಾಗಿದ್ದು, ವಾರ್ಡ್​ಮಟ್ಟದಲ್ಲೂ ಉಸ್ತುವಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದೆ. ವಾರ್ಡ್​ ಕಚೇರಿ ಬಳಿಗೆ ಶನಿವಾರ ಮುಂಜಾನೆ ಸಮೀಕ್ಷಾದಾರರು ಆಗಮಿಸಿದ್ದು, ಅವರಿಗೆ ಗುರುತಿನ ಚೀಟಿ ಹಾಗೂ ಅಗತ್ಯ ಸಲಕರಣೆಗಳನ್ನು ಕೊಡಲಾಯಿತು. ಜತೆಗೆ ಸಮೀಕ್ಷೆಗೆ ಬೇಕಾಗಿರುವ ಮೊಬೈಲ್​ ಆ್ಯಪ್​ಅನ್ನು ಡೌನ್​ಲೋಡ್​ ಮಾಡಿಕೊಡಲಾಯಿತು. ಉಸ್ತುವಾರಿ ಕೇಂದ್ರಗಳ ಬಳಿಯೂ ಕೆಲವು ಸಮೀಕ್ಷಾದಾರರು ಅವ್ಯವಸ್ಥೆಯ ಕುರಿತು ಅಸಮಾಧಾನ ಹೊರ ಹಾಕಿದ್ದು, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಅನಾರೋಗ್ಯವಿದ್ದರೂ ವಿನಾಯಿತಿ ಇಲ್ಲ: ನನಗೆ ತೆರೆದ ಹೃದಯ ಚಿಕಿತ್ಸೆ(ಓಪನ್​ ಹಾರ್ಟ್​ ಸರ್ಜರಿ)ಯಾಗಿದೆ. ಪ್ರತಿ ದಿನವೂ ಐದಾರು ಮಾತ್ರೆಗಳನ್ನು ನುಂಗಬೇಕಿದೆ. ಮೆಟ್ಟಿಲುಗಳನ್ನು ಏರಿ ಇಳಿಯಬಾರದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆರೋಗ್ಯ ಸ್ಥಿತಿ ಏರುಪೇರಾಗುತ್ತಿರುವುದರಿಂದ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಆಯುಕ್ತರಿಗೆ ಮನವಿ ಮಾಡಿದ್ದೆ. ಅದನ್ನು ಪರಿಗಣಿಸದೆ ಸಮೀೆಗೆ ನಿಯೋಜಿಸಿದ್ದಾರೆ ಎಂದು ಕೆಂಗೇರಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಗೋವಿಂದಯ್ಯ ಅಳಲು ತೊಡಿಕೊಂಡಿದ್ದಾರೆ.ನನ್ನ ಮನೆ ನಂದಿನಿ ಲೇಔಟ್​ನಲ್ಲಿ, ಕೆಲಸ ಕೆಂಗೇರಿಯಲ್ಲಿದೆ. ಸಮೀಕ್ಷೆಗೆ ಮಾತ್ರ ಗರುಡಾಚಾರ್​ ಪಾಳ್ಯಕ್ಕೆ ನಿಯೋಜನೆ ಮಾಡಿದ್ದಾರೆ. ಎಲ್ಲಿಂದ ಎಲ್ಲಿ ಕೆಲಸ ಮಾಡುವುದು. ನನ್ನನ್ನು ಯಾವ ರೀತಿಯಲ್ಲದರೂ ಪರೀಕ್ಷೆಗೆ "ಒಳ ಪಡಿಸಿ, ಸಮಸ್ಯೆ ಇರುವುದು ನಿಜವಾದರೆ ವಿನಾಯಿತಿ ನೀಡಲಿ ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ.

ಸಂಕಷ್ಟದ ಸ್ಥಿತಿ: ನನ್ನ ಮಗ ಹಾಸಿಗೆ ಹಿಡಿದಿದ್ದಾನೆ. ಆತನಿಗೆ ಮೂರು ಹೊತ್ತು ನಾನೇ ಊಟ ಮಾಡಿಸಬೇಕು. ಇಂತಹ ಸಮಸ್ಯೆ ನಡುವೆಯೂ ತರಬೇತಿಗೆ ಹಾಜರಾಗಿದ್ದೆ. ಅಲ್ಲಿ ನನ್ನ ಮೊಬೈಲ್​ ನಂಬರ್​ ತಪ್ಪಾಗಿ ನಮೂದಾಗಿತ್ತು. ಅದನ್ನು ಸರಿ ಮಾಡಿಕೊಟ್ಟಿದ್ದೆ. ಅದನ್ನು ಪರಿಗಣಿಸಿಲ್ಲ, ನನಗೆ ಯಾವ ರೀತಿಯ ಸಂದೇಶಗಳು ಬಂದಿಲ್ಲ. ದೂರದ ಪ್ರದೇಶಕ್ಕೆ ಸಮೀಕ್ಷೆಗೆ ಹಾಕಿದ್ದಾರೆ. ಒಂದು ದಿನದ ಮಟ್ಟಿಗಾದರೆ ಮಗನ ಜವವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಬರಬಹುದು, ಸಮೀಕ್ಷೆ ನಡೆಯುವ 15 ದಿನವೂ ಹೇಗೆ ನಿಭಾಯಿಸುವುದು. ಇಂತಹ ಸ್ಥಿತಿಯಲ್ಲಿ ಏಕಾಗ್ರತೆಯಿಂದ ಹೇಗೆ ಸಮೀಕ್ಷೆ ಮಾಡಲಿ, ಮೂರು ಬಾರಿ ಮನವಿ ಮಾಡಿಕೊಂಡಿದ್ದೇನೆ ಆದರೂ ವಿನಾಯಿತಿ ನೀಡಿಲ್ಲ ಎಂದು ಸಚಿವಾಲಯದ ಅಧಿಕಾರಿ ಸುಜಾತಾ ದು@ಖ ತೊಡಿಕೊಂಡಿದ್ದಾರೆ.

ತಾಯಿಗೋಸ್ಕರ ಬಂದ ಮಗ: ನನ್ನ ತಾಯಿಯನ್ನು ಸಮೀಕ್ಷೆಗೆ ನಿಯೋಜಿಸಿದ್ದಾರೆ. ಆಕೆಗೆ ಅಧಿಕ ಮಧುಮೇಹ ಹಾಗೂ ರಕ್ತದೊತ್ತಡದ ಸಮಸ್ಯೆ ಇದೆ. ಇನ್ಸೂಲಿನ್​ ಇಂಜೆಕ್ಷನ್​ ಹಾಗೂ ಮಾತ್ರೆಗಳನ್ನು ತೆಗೆದುಕೊಂಡು ನಾನು ನನ್ನ ಕೆಲಸ ಬಿಟ್ಟು ಆಕೆಯ ಜತೆಯಲ್ಲಿ ಬಂದಿದ್ದೇನೆ. ಸೋಮವಾರದಿಂದ ನಾನು ನನ್ನ ಕೆಲಸಕ್ಕೆ ಹೋಗಬೇಕು, ತಾಯಿ ಜತೆ ಬರಲು ಹೇಗೆ ಸಾಧ್ಯ. ಇಲ್ಲಿಂದ ಹೊರಮಾವು ಭಾಗಕ್ಕೆ ಗಣತಿಗಾಗಿ ನಿಯೋಜಿಸಿದ್ದಾರೆ. ಅಷ್ಟು ದೂರ ಹೋಗಿ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ರಾಜಾರಾಜೇಶ್ವರಿ ನಗರದ ಸಿಬ್ಬಂದಿ ಒಬ್ಬರ ಮಗ ಪ್ರಶ್ನಿಸಿದ್ದಾರೆ.

ಅಧಿಕಾರಿಗಳು ಒಪ್ಪುತ್ತಿಲ್ಲ: ವಿಧಾನಸೌಧದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರವಿಕುಮಾರ್​ ಮಾತನಾಡಿ, ನಾನು ಸಂಪೂರ್ಣ ಅಂಧ, ಒಂದು ಚೂರು ಕಣ್ಣು ಕಾಣಿಸುವುದಿಲ್ಲ. ಹೇಗೆ ಸಮೀೆ ಮಾಡಲಿ, ವಿನಾಯಿತಿ ನೀಡಿ ಎಂದರೆ ಅಧಿಕಾರಿಗಳು ಒಪ್ಪುತ್ತಿಲ್ಲ ಎಂದರು.

ಕಿರುಕುಳ ನೀಡಬೇಡಿ: ಅವೈಜ್ಞಾನಿಕವಾಗಿ ಸಮೀೆ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರಿಗೆ 250 ಮನೆಗಳ ಗುರಿ, ನಾಗರಭಾವಿಯಲ್ಲಿ ವಾಸ ಇರುವವರನ್ನು ವಿಜ್ಞಾನನಗರಕ್ಕೆ ನಿಯೋಜನೆ, ಅಲ್ಲಿಗೆ ಹೋಗಲು ಸುಮಾರು ಒಂದೂವರೆ ಗಂಟೆ ಪ್ರಯಾಣ ಮಾಡಬೇಕಿದೆ. ನಾವು ಸಮೀಕ್ಷೆ ಮಾಡುವುದಿಲ್ಲ ಎಂದು ಹೇಳುತ್ತಿಲ್ಲ. ಆದರೆ ಸಮಸ್ಯೆಯನ್ನು ಅರ್ಥೈಸಿಕೊಂಡು ನಿಯೋಜನೆ ಮಾಡಿ. ಅನಗತ್ಯವಾಗಿ ಕಿರುಕುಳ ನೀಡಬೇಡಿ ಎಂದು ಸಮೀಾದಾರರೊಬ್ಬರು ಮನವಿ ಮಾಡಿದ್ದಾರೆ.

ಮಹಿಳೆಯರಿಗೆ ಸಮಸ್ಯೆ: ಗಣತಿದಾರರನ್ನು ನಿಯೋಜನೆ ಮಾಡುವ ಮೊದಲು ಪ್ರತಿಯೊಬ್ಬರಿಂದಲೂ ಅವರು ಕೆಲಸ ಮಾಡುವ ಮತ್ತು ವಾಸದ ಸ್ಥಳ ವಿಳಾಸ ಪಡೆದುಕೊಂಡಿದ್ದಾರೆ. ಅದಕ್ಕೆ ಹತ್ತಿರದ ಪ್ರದೇಶಕ್ಕೆ ನಿಯೋಜನೆ ಮಾಡುವ ಬದಲಿಗೆ, ದೂರದ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ. ಆರಂಭದಲ್ಲಿ 10 ವಾರ್ಡ್​ಗಳನ್ನು ಆಯ್ಕೆ ಮಾಡಿಕೊಳ್ಳಲು ಸಮೀಕ್ಷಾದಾರರಿಗೆ ಸೂಚನೆ ನೀಡಲಾಗಿತ್ತು. ಆದರೆ ಆಯ್ಕೆ ಮಾಡಿಕೊಂಡ ಪ್ರದೇಶಗಳನ್ನು ಬಿಟ್ಟು ಬೇರೆ ಪ್ರದೇಶಗಳಿಗೆ ನಿಯೋಜನೆ ಮಾಡಿದ್ದಾರೆ. ಮಹಿಳೆಯರಿಗಂತೂ ವಿಪರೀತ ತೊಂದರೆಯಾಗಿದೆ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಅಳಲು ತೊಡಿಕೊಂಡಿದ್ದಾರೆ.

ಅನಾರೋಗ್ಯದ ವಿಚಾರವಾಗಿ ಸಿಬ್ಬಂದಿಗಳು ಅಗತ್ಯ ದಾಖಲೆ ನೀಡಿದರೆ ಸಮೀಕ್ಷೆಯಿಂದ ವಿನಾಯಿತಿ ನೀಡಲಾಗುವುದು. ಜತೆಗೆ ಮದುವೆ ಮತ್ತು ಸಾವಿನ ವಿಚಾರಗಳಿಗೂ ಸಮೀಕ್ಷೆಯಿಂದ ವಿನಾಯಿತಿ ನೀಡಲಾಗುವುದು. ನಗರದ ಎಲ್ಲಾ ನಾಗರಿಕರು ಅಗತ್ಯ ದಾಖಲೆಗಳಾದ ಆಧಾರ್​ ಕಾರ್ಡ್​,ರೇಷನ್​ ಕಾರ್ಡ್​ ಸೇರಿದಂತೆ ಇತರೆ ದಾಖಲೆಗಳನ್ನು ಇಟ್ಟುಕೊಂಡು ಸಮೀಾದಾರರಿಗೆ ಸಹಕರಿಸಬೇಕು. > ಎಂ.ಮಹೇಶ್ವರ್​ ರಾವ್​, ಜಿಬಿಎ ಮುಖ್ಯ ಆಯುಕ್ತ

ಸಮೀಕ್ಷಾದಾರರ ನಿಯೋಜನೆ ಸಮೀಕ್ಷಾದಾರರ (15 ರಿಂದ 20)ಕಾರ್ಯವೈಖರಿಯನ್ನು ನಿರೀಸಲು ಒಬ್ಬ ಉಪ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತಿ 300 ಮನೆಗಳಿಗೆ ಒಬ್ಬರಂತೆ ಸಮೀಾದಾರರನ್ನು ನಿಯೋಜಿಸಲಾಗಿದ್ದು, ಅವರು ತಮ್ಮ ವ್ಯಾಪ್ತಿಯ ಮನೆಮನೆಗಳಿಗೆ ಭೇಟಿ ನೀಡಿ ಸಮೀೆ ನಡೆಸಲಿದ್ದಾರೆ. ಸಮೀಾ ಕಾರ್ಯಕ್ಕಾಗಿ ಸರ್ಕಾರಿ ನೌಕರರು, ನಿಗಮ ಮಂಡಳಿಗಳ ಅಧಿಕಾರಿ, ನೌಕರರನ್ನು ನಿಯೋಜಿಸಲಾಗಿದ್ದು, 33 ತರಬೇತಿ ಕೇಂದ್ರಗಳಲ್ಲಿ 17,500 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

ಮೊದಲ ದಿನದ ವಿವರ:

ಕೇಂದ್ರ ಪಾಲಿಕೆ : 2,822

ಪೂರ್ವ ಪಾಲಿಕೆ : 3,105

ಉತ್ತರ ಪಾಲಿಕೆ : 5,987

ದಕ್ಷಿಣ ಪಾಲಿಕೆ : 3,145

ಪಶ್ಚಿಮ ಪಾಲಿಕೆ : 7,082

ಒಟ್ಟು ಮನೆಗಳು: 22,141

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net