ಮೃತನ ಕುಟುಂಬಕ್ಕೆ ಶೀಘ್ರ ಪರಿಹಾರ ನೀಡಲಿ

IMG-20240916-WA0208
Published on

ಸಾಲಿಗ್ರಾಮ: ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ ಗೋವಿಂದೇಗೌಡ ಕುಟುಂಬಕ್ಕೆ ರಾಜ್ಯ ಸರ್ಕಾರ ಶೀಘ್ರ ಪರಿಹಾರ ಘೋಷಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವರೂ ಆದ ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದರು.


ಭಾನುವಾರ ಬೆಟ್ಟಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿರುವ ಹಾಗೂ ಗ್ರಾಮದ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದರು. ಕಲುಷಿತ ನೀರು ಕುಡಿದು ಗ್ರಾಮದ ರೈತ ಮೃತಪಟ್ಟಿದ್ದು ಕುಟುಂಬದ ಸದಸ್ಯರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಶೀಘ್ರ ಪರಿಹಾರ ಘೋಷಿಸಬೇಕು. ಚಿಕಿತ್ಸೆ ಪಡೆದುಕೊಂಡಿರುವ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.


ಅಧಿಕಾರದಲ್ಲಿರುವವರು ತಕ್ಷಣ ನೊಂದವರಿಗೆ ಪರಿಹಾರ ಸಿಗುವಂತೆ ಮಾಡಬಹುದಿತ್ತು. ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರು ಮಾಹಿತಿ ಪಡೆದು ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ ಎಂದರು.


ಗೋವಿಂದೇಗೌಡ ಕುಟುಂಬಕ್ಕೆ ಸಾ.ರಾ.ಮಹೇಶ್ 25 ಸಾವಿರ ರೂ. ಹಾಗೂ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ರೋಗಿಗಳಿಗೂ ಆರ್ಥಿಕ ನೆರವು ನೀಡಿದರು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿಪಂ ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಎಂ.ಟಿ.ಕುಮಾರ್, ಸಿ.ಟಿ.ಮಹೇಶ್, ಹದರನಹಳ್ಳಿ ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net