ಇಸ್ಕಾನ್‌ನಲ್ಲಿ ಸಂಭ್ರಮದಿಂದ ‘ಗೌರ ಪೂರ್ಣಿಮಾ’ ಆಚರಣೆ

Iskcon - 5
Published on

ಬೆಂಗಳೂರು: ಶ್ರೀ ಚೈತನ್ಯ ಮಹಾಪ್ರಭು ಅವತಿರಿಸಿದ ದಿನವಾದ ‘ಗೌರ ಪೂರ್ಣಿಮಾ’ ಉತ್ಸವವನ್ನು ಇಸ್ಕಾನ್ ಬೆಂಗಳೂರಿನ ಹರೇ ಕೃಷ್ಣಗಿರಿಯ ದೇವಾಲಯದಲ್ಲಿ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಸೋಮವಾರ ಆಚರಿಸಲಾಯಿತು.

ಐದು ಶತಮಾನಗಳ ಹಿಂದೆ ಶ್ರೀ ಚೈತನ್ಯ ಮಹಾಪ್ರಭು ಅವರು ಭಾರತದಲ್ಲಿ ಅವತರಿಸಿ ಹರಿನಾಮದ ಮೂಲಕ ಕೃಷ್ಣ ಭಕ್ತಿಯನ್ನು ಪಸರಿಸಿದರು. ಶ್ರೀಗಳು ಅವತರಿಸಿದ ಈ ದಿನವನ್ನು ಸ್ಮರಿಸಲು ಇಡೀ ದಿನ ಭಕ್ತರಿಂದ ಹರಿನಾಮ ಸಂಕೀರ್ತನೆ ನಡೆಯಿತು. ಪವಿತ್ರ ನಾಮಗಳ ಜಪ ಮತ್ತು ಶ್ರೀ ಕೃಷ್ಣನಿಗೆ ಪರಿಶುದ್ಧ ಭಕ್ತಿ ಸೇವೆಯನ್ನು ಅರ್ಪಿಸಲಾಯಿತು.

ಸಂಜೆ ಶ್ರೀ ನಿತಾಯ್ ಗೌರಾಂಗರಿಗೆ ವೈಭವದ ಉತ್ಸವ ಮತ್ತು ವಿಶೇಷ ಅಭಿಷೇಕ ನಡೆಯಿತು. ಸುಮಾರು 10 ಸಾವಿರ ಭಕ್ತರು ಈ ಉತ್ಸವಗಳಲ್ಲಿ ಪಾಲ್ಗೊಂಡಿದ್ದರು. ಹೂಗಳಿಂದ ಅಲಂಕರಿಸಿದ್ದ ಶ್ರೀ ನಿತಾಯ್ ಗೌರಾಂಗರ ವಿಗ್ರಹಗಳನ್ನು ಶ್ರೀಲ ಪ್ರಭುಪಾದರ ಮೂರ್ತಿಯೊಂದಿಗೆ ಸಂಕೀರ್ತನೆ ಜತೆಗೆ ಮೆರವಣಿಗೆಯಲ್ಲಿ ಬಯಲು ರಂಗಮಂದಿರಕ್ಕೆ ಕರೆತರಲಾಯಿತು. ಹಾಲು, ಜೇನು, ಮೊಸರು, ತುಪ್ಪ, ಪಂಚಗವ್ಯ, ಹಣ್ಣಿನ ರಸ ಮುಂತಾದ ಪರಿಕರಗಳೊಂದಿಗೆ ಶ್ರೀ ನಿತ್ಯಾನಂದ ಮತ್ತು ಶ್ರೀ ಚೈತನ್ಯರ ವಿಗ್ರಹಗಳಿಗೆ ಅಭಿಷೇಕ ಮಾಡಲಾಯಿತು. ಆನಂತರ ವೈವಿಧ್ಯಮಯ ದೀಪಗಳ ಆರತಿಯನ್ನು ಭಕ್ತರು ‘ಗೌರ ಆರತಿ’ ಭಜನೆಯೊಂದಿಗೆ ಬೆಳಗಲಾಯಿತು. ನಂತರ ಪುರುಷ ಸೂಕ್ತ ಪಠಣದೊಂದಿಗೆ 108 ಪವಿತ್ರ ಜಲದ ಕಳಶಗಳಿಂದ ಅಭಿಷೇಕ ಮಾಡಿ ನಿತಾಯ್ ಗೌರಾಂಗರಿಗೆ ವೈವಿಧ್ಯಮಯ ಪುಷ್ಪಾಭಿಷೇಕ ನಡೆಯಿತು.

ಉತ್ಸವದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಮತ್ತು ಅವರು ಬೋಧಿಸಿದ ಕೃಷ್ಣ ಪ್ರಜ್ಞೆ ಸಿದ್ಧಾಂತದ ನಾನಾ ಅಂಶಗಳನ್ನು ಒಳಗೊಂಡಿದ್ದ ಕಿರುಚಿತ್ರ ಪ್ರದರ್ಶಿಸಲಾಯಿತು. ಶ್ರೀ ಚೈತನ್ಯರ ಬದುಕು, ಅವರ ಬೋಧನೆ, ದಕ್ಷಿಣ ಭಾರತದಲ್ಲಿ ತೀರ್ಥಯಾತ್ರೆ ಸಂದರ್ಭದಲ್ಲಿ ಅವರು ಭೇಟಿ ನೀಡಿದ್ದ ಪವಿತ್ರ ಸ್ಥಳಗಳು ಮತ್ತು ಚೈತನ್ಯ ಪರಂಪರೆಯಲ್ಲಿ ಪ್ರಸ್ತುತ ಆಚಾರ್ಯರಾದ ಶ್ರೀಲ ಪ್ರಭುಪಾದರ ಕೊಡುಗೆ ಕುರಿತಂತೆ ಸಂಕ್ಷಿಪ್ತ ವಿವರಣೆ ಇದ್ದ ಈ ಕಿರುಚಿತ್ರವು ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧಗೊಳಿಸಿತು. ಭಗವಂತನಿಗೆ ವೈಭವದ ಪಲ್ಲಕ್ಕಿ ಉತ್ಸವ ಹಾಗೂ ಭಕ್ತರಿಗೆ ಪ್ರಸಾದ ವಿನಿಯೋಗದೊಂದಿಗೆ ಗೌರ ಪೂರ್ಣಿಮಾ ಆಚರಣೆ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net