ಸಿಲಿಂಡರ್ ಸ್ಫೋಟಕ್ಕೆ ಮನೆ ಜಖಂ

28arsph2ep
Published on

ಅರಸೀಕೆರೆ: ನಗರದ ಹಾಸನ ರಸ್ತೆಗೆ ಹೊಂದಿಕೊಂಡಂತಿರುವ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಲ್ಲಿ ಬುಧವಾರ ಬೆಳಗ್ಗೆ ಅಡುಗೆ ಅನಿಲ ಸೋರಿಕೆಯಿಂದಾಗಿ ಸಿಲಿಂಡರ್ ಸ್ಫೋಟಗೊಂಡು ಒಬ್ಬ ಗಾಯಗೊಂಡಿದ್ದಾರೆ.


ಮನೆ ಮಾಲೀಕ ಮಣಿಶೇಖರ್ ಅವರ ಪುತ್ರ ಪ್ರವೀಣ್ ಮನೆಯಲ್ಲಿ ಮಲಗಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಜಖಂಗೊಂಡಿದ್ದರೆ, ಶೀಟ್‌ಗಳು ಹಾರಿಹೋಗಿವೆ. ಪ್ರವೀಣ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ನಿವಾಸಿಗಳು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದರು. ಮನೆಯಲ್ಲಿದ್ದ ಪರಿಕರಗಳು ಹಾಗೂ ದಿನಸಿ ಪದಾರ್ಥಗಳು ಸಂಪೂರ್ಣ ಹಾಳಾಗಿವೆ. ವಾರ್ಡ್ ಸದಸ್ಯೆ ಅಭಿರಾಮಿ ಶಿವನ್‌ರಾಜ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net