ಬ್ರಹ್ಮ ರಥೋತ್ಸವದಲ್ಲಿ ಗರುಡ ಪ್ರದಕ್ಷಿಣೆ

10 yelandur 01
Published on

ಯಳಂದೂರು: ತಾಲೂಕಿನ ಚಂಪಕಾರಣ್ಯ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ, ಸೋಲಿಗರ ಆರಾಧ್ಯ ದೈವ ಬಿಳಿಗಿರಿರಂಗನಾಥಸ್ವಾಮಿ ಆವಾಸಸ್ಥಾನವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗರುಡ ಪ್ರದಕ್ಷಿಣೆ ಹಾಕುತ್ತಿದ್ದಂತೆಯೇ ಸಂಭ್ರಮ ಸಡಗರಗಳಿಂದ ಬ್ರಹ್ಮರಥೋತ್ಸವ ಜರುಗಿತು.

ಬ್ರಹ್ಮರಥೋತ್ಸವ (ದೊಡ್ಡ ತೇರು)ವನ್ನು ಬೆಟ್ಟದ ತೇರಿನ ಬೀದಿಯಲ್ಲಿ ತೇರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಗೋವಿಂದನ ನಾಮಸ್ಮರಣೆಯಲ್ಲಿ ಸಾವಿರಾರು ಭಕ್ತರು ರೈತ ಎಳೆದು ಪುನೀತ ಭಾವ ಮೆರೆದರು ಬೆಳಗ್ಗೆ 5 ಗಂಟೆಯಿಂದಲೇ ವಿವಿಧ ಧಾರ್ಮಿಕ ವಿಧಿಗಳು ನಡೆದವು. ಮೊದಲಿಗೆ ಕಲ್ಯಾಣೋತ್ಸವ, ಪ್ರಸ್ಥಾನ ಮಂಟಪೋತ್ಸವಗಳ ಅಲಂಕಾರ ಮಾಡಲಾಗಿತ್ತು. ದೇವರಿಗೆ ತುಳಸಿ ಸೇರಿದಂತೆ ವಿವಿಧ ಬಣ್ಣಬಣ್ಣದ ಹೂವುಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ 11.02 ರಿಂದ 11.15 ಗಂಟೆ ಒಳಗೆ ಸಲ್ಲುವ ಶುಭ ಕರ್ಕಾಟಕ ಲಗ್ನದ ಕನ್ಯಾ ಬುಧ ನಾವಾಂದ ಮೂಹೂರ್ತದಲ್ಲಿ ಮಹಾರಥಕ್ಕೆ ವಿಶೇಷ ಚಿನ್ನಾಭರಣಗಳಿಂದ ಅಲಂಕೃತವಾದ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಸಾವಿರಾರು ಭಕ್ತರು ತೇರು ಎಳೆದು ಭಕ್ತಿ ಸಮರ್ಪಿಸಿದರು. ತೇರನ್ನು ಎಳೆಯುತ್ತಿದ್ದಂತೆ ಶಂಖ ಜಾಗಟೆಗಳ ಸಪ್ಪಳ, ಭಕ್ತರು ಹಾಡಿದ ಗೋವಿಂದ ನಾಮಾವಳಿ ಎಲ್ಲಡೆ ಪಸರಿಸಿತು. ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಕಾಡಿನ ಅನೇಕ ಪೋಡುಗಳಿಂದ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೋಲಿಗರು ಆಗಮಿಸಿ ತಮ್ಮ ನೆಚ್ಚಿನ ಭಾವ ಬಿಳಿಗಿರಿರಂಗಪ್ಪನಿಗೆ ಭಕ್ತಿ ಸಮರ್ಪಿಸಿದರು.

ಗರುಡಾಗಮನ, ಭಕ್ತರು ಪುನೀತ: ತೇರು ಆರಂಭಗೊಳ್ಳುವ ಮುಂಚೆ ರಥದ ಮೇಲ್ಭಾಗದಲ್ಲಿರುವ ಆಗಸದಲ್ಲಿ ಗರುಡ ಪಕ್ಷಿಯು ಹಾರುವ ಪ್ರತೀತಿ ಇದ್ದು. ಶನಿವಾರವೂ ಕೂಡ ತೇರನ್ನೆಳೆಯುವ ಕೆಲ ನಿಮಿಷಗಳ ಮುಂಚೆ ಆಗಸದಲ್ಲಿ ಗರುಡ ಪಕ್ಷಿಗಳು ಹಾರಾಡಿದವು. ತೇರಿನ ಸುತ್ತ ಪ್ರದಕ್ಷಿಣೆಯನ್ನು ಹಾಕಿದಾಗ ಗೋವಿಂದ, ಗೋವಿಂದ ನಾಮಾವಳಿ ಶಂಖ, ಜಾಗಟೆಗಳು ಮೊಳಗಿತು. ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದ ದೃಶ್ಯ ಅಲ್ಲಲ್ಲಿ ಕಾಣಸಿಕ್ಕಿತು.

ಹಣ್ಣುದವನ ಎಸೆದ ಭಕ್ತರು: ವಿವಾಹವಾಗಿರುವ ನೂತನ ದಂಪತಿಗಳೂ ಸೇರಿದಂತೆ ಜಾತ್ರೆಗೆ ಆಗಮಿಸಿದ ಭಕ್ತರು ಇಲ್ಲೇ ಸಿಗುವ ಹಣ್ಣು ದವನ ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸಿದ್ದು ಕಂಡುಬಂದಿತು. ನವದಂಪತಿಗಳಲ್ಲದೇ ಹರಕೆ ಹೊತ್ತಿದ್ದ ಅನೇಕ ಭಕ್ತರು ಸಹ ಈ ಧಾರ್ಮಿಕ ವಿಧಿಯನ್ನು ತೀರಿಸಿದರು. ಜತೆಗೆ ಅಲ್ಲೇ ಧೂಪವನ್ನು ಹಾಕುವ ಮೂಲಕ ಭಕ್ತಿ ಮೆರೆದರು. ಕರಿಯಣ್ಣ, ಕೆಂಚಣ್ಣನ ಮುಖವಾಡದ ಹರಿಗೆಗಳನ್ನು ಹಿಡಿದ ಭಕ್ತರ ಗುಂಪು ಈ ಭಾಗದ ವಿಶಿಷ್ಟ ಸೇವೆಯಾದ ಬ್ಯಾಟೆ ಮನೆ ಸೇವೆಯನ್ನು ಮಾಡುವ ಮೂಲಕ ಭಕ್ತಿ ಮರೆಯಿತು.

ಭರ್ಜರಿ ವ್ಯಾಪಾರ: ತೇರಿನ ಸಂದರ್ಭದಲ್ಲಿ ರಥದ ಬೀದಿಯಲ್ಲಿ ನೂರಾರು ವರ್ತಕರು ತೇರಿಗೆ ಆಗಮಿಸಿ ತಮ್ಮ ಅಂಗಡಿ ಮಳಿಗೆಗಳನ್ನು ತೆರೆದಿದ್ದರು. ಸಿಹಿತಿಂಡಿ, ಪುರಿಖಾರ, ಮಕ್ಕಳ ಆಟಿಕೆ ಸಾಮಾನುಗಳು, ದಿನಬಳಕೆಯ ವಸ್ತುಗಳ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು. ಅಲ್ಲಲ್ಲಿ ಇರುವ ಮಂಟಪಗಳಲ್ಲಿ ಹರಕೆ ಹೊತ್ತ ಭಕ್ತರು ನೀರುಮಜ್ಜಿಗೆ, ಪಾನಕ, ಕೋಸಂಬರಿ ಹಾಗೂ ವಿವಿಧ ತಿಂಡಿಗಳನ್ನು ಅಲ್ಲಲ್ಲಿ ಮಾಡಲಾಗಿದ್ದ ಅರವಟ್ಟಿಗೆಗಳಲ್ಲಿ ನೀಡಿ ಪುನೀತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net