ಟಿಸಿ ಸ್ಪೋಟ ಕನ್ಸರ್‌ವೆನ್ಸಿಯಲ್ಲಿದ್ದ ಕಸಕ್ಕೆ ಬೆಂಕಿ

20231214_135155(0)
Published on

ಚನ್ನಪಟ್ಟಣ

ನಗರದ ಪುಣ್ಯ ಆಸ್ಪತ್ರೆಯ ಎದುರು ಕನ್ಸರ್ವೆನ್ಸಿ ರಸ್ತೆಯಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡು ಬೆಂಕಿ ಹೊತ್ತಿ ಉರಿದಿದೆ. ಕುವೆಂಪುನಗರ ಎರಡನೇ ಅಡ್ಡರಸ್ತೆಯಲ್ಲಿನ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬುಧವಾರ ರಾತ್ರಿ ಸ್ಫೋಟಗೊಂಡಿದೆ. ಸ್ಫೋಟದಿಂದ ಉಂಟಾದ ಬೆಂಕಿ ರಸ್ತೆಯಲ್ಲಿ ಬಿದ್ದಿದ್ದ ಕಸದ ರಾಶಿಗೂ ವ್ಯಾಪಿಸಿ ಇಡೀ ಗಲ್ಲಿಗೆ ಆವರಿಸಿದೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ.

ಆಸ್ಪತ್ರೆ ಹಾಗೂ ಜನವಸತಿ ಪ್ರದೇಶದ ಕನ್ಸರ್ವೆನ್ಸಿ ರಸ್ತೆಯಲ್ಲಿನ ಈ ಟ್ರಾನ್ಸ್ಫಾರ್ಮರ್ ಸ್ಫೋಟದ ಶಬ್ಧಕ್ಕೆ ಹಾಗೂ ಬೆಂಕಿಯಿಂದ ಜನತೆ ಬೆಚ್ಚಿಬಿದ್ದರು. ಜತೆಗೆ ತ್ಯಾಜ್ಯಕ್ಕೆ ಬೆಂಕಿ ತಗುಲಿದ್ದು ಆತಂಕಕ್ಕೆ ಕಾರಣವಾಯಿತು. ಗಲ್ಲಿ ರಸ್ತೆ ಸಂಪೂರ್ಣ ತ್ಯಾಜ್ಯದಿಂದ ಕೂಡಿದ್ದು, ತ್ಯಾಜ್ಯ ತೆರವಿಗೆ ನಗರಸಭೆ ವಿಲಗೊಂಡಿರುವುದೇ ಘಟನೆಗೆ ಕಾರಣ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ವಿರುದ್ಧ ಆಕ್ರೋಶ

ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಗಲ್ಲಿ ರಸ್ತೆಯನ್ನು ಸ್ವಚ್ಛಗೊಳಿಸಲು ಗುರುವಾರ ಆಗಮಿಸಿದ ನಗರಸಭೆ ಅಧಿಕಾರಿಗಳನ್ನು ಸ್ಥಳೀಯ ನಿವಾಸಿಗಳು ತರಾಟೆಗೆ ತೆಗೆದುಕೊಂಡರು. ಜಾಗವನ್ನು ಸ್ವಚ್ಛಗೊಳಿಸಲು ಪೌರಕಾರ್ಮಿಕರು ಮುಂದಾಗುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು, ಹಲವಾರು ತಿಂಗಳಿಂದ ಈ ಜಾಗದಲ್ಲಿ ಕಸದ ರಾಶಿ ಬಿದ್ದಿದೆ. ಇಡೀ ಗಲ್ಲಿ ರಸ್ತೆ ಕಸದಿಂದ ಮುಳುಗಿ ಹೋಗಿದೆ. ತ್ಯಾಜ್ಯ ತೆರವಿಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳಲಿಲ್ಲ. ಈಗ ಸ್ವಚ್ಛ ಮಾಡುತ್ತಿದ್ದೀರಿ. ಏನಾದರೂ ಅನಾಹುತ ಸಂಭವಿಸಿದ್ದರೆ ಹೊಣೆ ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾತಿನ ಚಕಮಕಿ

ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಕುಸುಮಾ ಮತ್ತು ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು, ಎಲ್ಲ ಗಲ್ಲಿ ರಸ್ತೆಗಳು ತ್ಯಾಜದಿಂದ ಮುಚ್ಚಿಹೋಗಿವೆ. ಈ ಗಲ್ಲಿಗಳ ಸ್ವಚ್ಛತೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು. ಈ ವೇಳೆ ನಗರಸಭೆ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮುಕಿಯೂ ನಡೆಯಿತು.

ಗಲ್ಲಿ ರಸ್ತೆಯಲ್ಲಿ ಆಸ್ಪತ್ರೆ ತ್ಯಾಜ್ಯ

ಈ ಗಲ್ಲಿ ರಸ್ತೆಯನ್ನು ಸ್ವಚ್ಛ ಮಾಡುವಾಗ ಆಸ್ಪತ್ರೆ ತ್ಯಾಜ್ಯವೇ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂತು. ಬ್ಯಾಂಡೇಜ್, ಸಿರಿಂಜ್, ಹರಿತವಾದ ಬ್ಲೇಡ್‌ಗಳ ಜತೆಗೆ ಇತರ ತ್ಯಾಜ್ಯ ಕಂಡುಬಂತು. ಗಲ್ಲಿ ರಸ್ತೆಯಲ್ಲಿ ಆಸ್ಪತ್ರೆ ತ್ಯಾಜ್ಯ ಸುರಿದಿದ್ದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಈ ರಸ್ತೆಯಲ್ಲಿ ಹಲವಾರು ಖಾಸಗಿ ಆಸ್ಪತ್ರೆಗಳಿದ್ದು, ತ್ಯಾಜ್ಯ ಸುರಿಯುವವರು ಯಾರು ಎಂಬ ಪ್ರಶ್ನೆ ಮೂಡಿದೆ. ಆಸ್ಪತ್ರೆ ತ್ಯಾಜ್ಯ ಸುರಿಯುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸ್ಥಳೀಯರು ಒತ್ತಾಯಿಸಿದರು.

ಎರಡನೇ ಅಡ್ಡರಸ್ತೆಯಿಂದ ಮೂರನೇ ಅಡ್ಡರಸ್ತೆಗೆ ಸಂಪರ್ಕ ಕಲ್ಪಿಸುವ ಕನ್ಸರ್ವೆನ್ಸಿ (ಗಲ್ಲಿ) ಸಂಪೂರ್ಣವಾಗಿ ತ್ಯಾಜ್ಯದಿಂದ ಮುಚ್ಚಿಹೋಗಿದೆ. ಸುಸಜ್ಜಿತ ಕಾಂಕ್ರೀಟ್ ರಸ್ತೆ ತ್ಯಾಜ್ಯ ವಿಲೇವಾರಿ ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಈ ತ್ಯಾಜ್ಯವನ್ನು ಇದುವರೆಗೂ ನಗರಸಭೆ ತೆರವುಗೊಳಿಸಿರಲಿಲ್ಲ. ಬೆಂಕಿ ತಗುಲಿದ ಮೇಲೆ ಸ್ವಚ್ಛ ಮಾಡಿದ್ದಾರೆ. ಇದಲ್ಲದೇ, ಈ ಜಾಗದಲ್ಲಿ ಆಸ್ಪತ್ರೆ ತ್ಯಾಜ್ಯ ಸುರಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕುಮಾರ್, ವಿದ್ಯುತ್ ಗುತ್ತಿಗೆದಾರ

ನಗರಸಭೆ ಕಸದ ವಾಹನಗಳು ಪ್ರತಿದಿನ ಮನೆಗಳಿಂದ ಕಸ ಸಂಗ್ರಹಿಸುತ್ತವೆ. ಆದರೂ ಇಂತಹ ಜಾಗದಲ್ಲಿ ಕಸ ಹಾಕುವುದು ನಿಯಂತ್ರಣಕ್ಕೆ ಬರುತ್ತಿಲ್ಲ. ಕನ್ಸರ್ವೆನ್ಸಿಯಲ್ಲಿ ಅಪಾರ ಪ್ರಮಾಣದ ಆಸ್ಪತ್ರೆ ತ್ಯಾಜ್ಯ ಸುರಿಯಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ರೀತಿ ತ್ಯಾಜ್ಯ ಸುರಿಯುವುದು ತಪ್ಪು. ಕೂಡಲೇ ಎಲ್ಲ ಖಾಸಗಿ ಆಸ್ಪತ್ರೆಗಳಿಗೂ ನೋಟಿಸ್ ನೀಡಲಾಗುವುದು.

ಕುಸುಮಾ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net