

ಬೈಂದೂರು: ಶಿರೂರು ಗ್ರಾಮದ ಕಳಿಹಿತ್ಲು ಕಡಲಕಿನಾರೆ ಬಳಿ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ. ಶಿರೂರಿನ ವಿವಿಧ ಕಡೆಗಳಿಂದ ಸಾರ್ವಜನಿಕರು ಕಸದ ತೊಟ್ಟೆಗಳನ್ನು ತಂದು ಈ ಭಾಗದಲ್ಲಿ ಎಸೆಯುವುದರಿಂದ ದುರ್ನಾತ ಬೀರುತ್ತಿದೆ.
ಶಿರೂರು ಗ್ರಾಮದ ಮುಸ್ಲಿಂಕೇರಿ ಮಾರ್ಗವಾಗಿ ಸಮುದ್ರ ಕಿನಾರೆ ಬದಿಯಲ್ಲಿನ ರಸ್ತೆ ಗ್ರಾಮದ ಕಳಿಹಿತ್ಲು ಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕಳಿಹಿತ್ಲು ಮೀನುಗಾರಿಕಾ ಬಂದರು ಸೇರಿದಂತೆ ನೈಸರ್ಗಿಕ ಸೌಂದರ್ಯ ಹೊಂದಿದ್ದು, ಈ ಪ್ರದೇಶಕ್ಕೆ ನಿತ್ಯ ನೂರಾರು ಜನ ಆಗಮಿಸುತ್ತಾರೆ. ಬೆಳಗ್ಗೆ ಜನಸಂಚಾರ ಕಡಿಮೆ ಇರುವ ಕಾರಣ ಸಾರ್ವಜನಿಕರು ಕಸದ ಮೂಟೆಗಳನ್ನು ತಂದು ಇಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಸ್ಥಳೀಯ ಮನೆಯ ಜನರು ವಾಸನೆಯಿಂದ ಕಂಗೆಟ್ಟು ಹೋಗುವಂತಾಗಿದೆ. ಅಲ್ಲದೇ ಪ್ರದೇಶದ ಜಾನುವಾರುಗಳು ಪ್ಲಾಸ್ಟಿಕ್ ತಿಂದು ಅನಾರೋಗ್ಯಕ್ಕೆ ಒಳಗಾಗುತ್ತಿವೆ.
ಈಗಾಗಲೇ ಶಿರೂರು ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಕಸ ಸಂಗ್ರಹಿಸುವ ವಾಹನಗಳಿದ್ದು, ಇನ್ನೊಂದು ವಾಹನ ದಾನಿಗಳ ನೆರವಿನಿಂದ ದೊರೆಯಲಿದೆ. ಈಗಾಗಲೇ ಪ್ರತಿ ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಸಾರ್ವಜನಿಕರ ಈ ನಿರ್ಲಕ್ಷೃ ಊರಿನ ಸ್ವಚ್ಛತೆ ಹಾಳು ಮಾಡುತ್ತಿದೆ. ಹೀಗಾಗಿ ಸ್ಥಳೀಯ ಗ್ರಾಪಂ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಸ್ಥಳದಲ್ಲಿ ಎಚ್ಚರಿಕೆ ಫಲಕ ಅಳವಡಿಸಬೇಕು ಎಂದು ಸ್ಥಳಿಯ ನಿವಾಸಿ ಕರಾವಳಿ ಗಿರೀಶ್ ಆಗ್ರಹಿಸಿದ್ದಾರೆ.