

ವಿಜಯವಾಣಿ ಸುದ್ದಿಜಾಲ ಹೆಬ್ರಿ
ರಾಷ್ಟ್ರೀಯ ಹೆದ್ದಾರಿ 169ಎ ಯ ಕನ್ಯಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆಯನ್ನು ಹೆದ್ದಾರಿಯ ಅಗಲೀಕರಣ ಸಂದರ್ಭ ಕೆಡವಲಾಗಿದ್ದು, ಸ್ಥಳಕ್ಕೆ ಚಾರ ಗ್ರಾಪಂ ಅಧ್ಯಕ್ಷ ದಿನೇಶ್ ಕುಮಾರ್ ಶೆಟ್ಟಿ ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಇಂಜಿನಿಯರ್ಗಳ ಜತೆ ಸಮಾಲೋಚಿಸಿದ ಅವರು ಶೀಘ್ರದಲ್ಲೇ ಶಾಲೆಯ ಆವರಣ ಗೋಡೆ ನಿರ್ಮಿಸಬೇಕು. ಮಳೆ ಇಲ್ಲದಿರುವುದರಿಂದ ತುರ್ತಾಗಿ ಕಾಮಗಾರಿ ಆರಂಭಿಸಬಹುದು. ಜಿಲ್ಲಾ ಪಂಚಾಯಿತಿ ವತಿಯಿಂದ ಸಹಕರಿಸಲಾಗುವುದು ಎಂದು ಭರವಸೆ ನೀಡಿದರು.
ಹಳೇ ವಿದ್ಯಾರ್ಥಿ ಸಂಘದ ಅರುಣ್ ಶೆಟ್ಟಿ ಮಾತನಾಡಿ, ಆವರಣಗೋಡೆ ಕೆಡವಿ ತುಂಬಾ ಸಮಯ ಕಳೆದಿದೆ. ಬಳಿಕ ನಿರ್ಮಿಸದೇ ಬಾಕಿ ಮಾಡಿದ್ದು, ಈ ಕುರಿತು ಸಂಸದರ ಜತೆ ಸಮಾಲೋಚನೆ ನಡೆಸಲಾಗಿದೆ. ವಾರದೊಳಗೆ ಕಾಮಗಾರಿ ಆರಂಭಿಸದಿದ್ದಲ್ಲಿ ಊರಿನ ಜನರ ಜತೆಗೂಡಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಶಿಕ್ಷಕಿ ನಳಿನಿ ಕಾಮತ್, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಪ್ರದೀಪ್ ಪೂಜಾರಿ, ಪ್ರಭಾಕರ್ ಶೆಟ್ಟಿ ಉಪಸ್ಥಿತರಿದ್ದರು.