ಕಂಡಲ್ಲಿ ಕಸ ಸುರಿದರೆ ದಂಡದ ಎಚ್ಚರಿಕೆಯಿತ್ತ ಹೊನ್ನಾಳಿ ಮುಖ್ಯಾಧಿಕಾರಿ

12
Published on

ಹೊನ್ನಾಳಿ: ನಾಗರಿಕರು ಎಲ್ಲೆಂದರಲ್ಲಿ ಕಸ ಎಸೆಯದೆ ಎರಡು ದಿನಗಳಿಗೊಮ್ಮೆ ಮನೆ ಬಾಗಿಲಿಗೆ ಬರುವ ಪುರಸಭೆಯ ವಾಹನಗಳಿಗೆ ಹಾಕುವಂತೆ ಮುಖ್ಯಾಧಿಕಾರಿ ಲೀಲಾವತಿ ಮನವಿ ಮಾಡಿದರು.

ಶನಿವಾರ ಪಟ್ಟಣದ ದುರ್ಗಿಗುಡಿಯ ಸಾರ್ವಜನಿಕ ಆಸ್ಪತ್ರೆ, ನ್ಯಾಯಾಲಯ, ಅಗ್ನಿಶಾಮಕ ದಳದ ಕಚೇರಿ ಇರುವ ಮುಖ್ಯರಸ್ತೆಯ
ಇಕ್ಕೆಲ ಪೊದೆ ತೆರವು ಕಾರ್ಯಾಚರಣೆ ವೇಳೆ ಮಾತನಾಡಿದರು.

ನಾಗರಿಕರು ಪಟ್ಟಣದ ಪ್ರಮುಖ ರಸ್ತೆಗಳ ಇಕ್ಕೆಲ ಪ್ಲಾಸ್ಟಿಕ್ ಚೀಲಗಳಲ್ಲಿ ಕಸ ತುಂಬಿ ಎಸೆಯುತ್ತಿರುವುದು ಹೆಚ್ಚಾಗಿದ್ದು, ಇದರಿಂದ ಇತರರಿಗೆ ತೊಂದರೆಯಾಗುತ್ತಿದೆ. ಎಲ್ಲೆಂದರಲ್ಲಿ ಕಸದ ಚೀಲ ಎಸೆಯಬಾರದು ಎಂದು ತಿಳಿಸಿದರು.

ಪಟ್ಟಣದ ಮರಳೋಣೆ ರಸ್ತೆ, ದುರ್ಗಿಗುಡಿ, ಮಾರಿಕೊಪ್ಪ ಮುಖ್ಯರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ಚೀಲ ಕಂಡುಬಂದಿದ್ದು, ಇನ್ಮುಂದೆ ಕಸ ಹಾಕಿದ ದೃಶ್ಯ ಕಂಡು ಬಂದರೆ ದಂಡ ವಿಧಿಸಿ, ಕ್ರಮ ಕೈಗೊಳ್ಳಲಾಗುವುದು. ಪುರಸಭೆಯ ವ್ಯಾಪ್ತಿಯ ಎಲ್ಲೆಂದರಲ್ಲಿ ಕಸ ಹಾಕದಂತೆ ಎಚ್ಚರಿಕೆಯ ಫಲಕ ಅಳವಡಿಸಲಾಗುವುದು ಎಂದು ಹೇಳಿದರು.

ಮನೆ ಮುಂದಿನ ನಲ್ಲಿಗಳಿಗೆ ಮುಚ್ಚಳಿಕೆ ಹಾಕಿಸದ ಕಾರಣ ನಿತ್ಯವೂ ಸಾವಿರಾರು ಲೀಟರ್ ನೀರು ವ್ಯರ್ಥವಾಗುತ್ತಿದೆ. ನಾಗರಿಕರು ಮೊದಲು ನಲ್ಲಿಗೆ ಮುಚ್ಚಳಿಕೆ ಹಾಕಿಸಬೇಕು. ಇನ್ನೊಂದು ವಾರದೊಳಗೆ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಡಂಗೂರ ಸಾರಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ನಾವೇ ಸ್ವಚ್ಛತೆ ಮಾಡಿಸಿ ಅದರ ವೆಚ್ಚ ವಸೂಲಿ ಮಾಡುತ್ತೇವೆ ಎಂದು ತಿಳಿಸಿದರು.

ಪುರಸಭೆಯ ಮಳಿಗೆಗಳ ಬಾಕಿ ಉಳಿಸಿಕೊಂಡಿರುವ ಬಾಡಿಗೆದಾರರು ಶೀಘ್ರವೇ ಬಾಡಿಗೆ ಪಾವತಿಸಬೇಕು. ಇಲ್ಲದಿದ್ದರೆ ಅಂಗಡಿಗೆ ಬೀಗ ಹಾಕಬೇಕಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net