ಜಿಲ್ಲೆಯಲ್ಲಿ ಕಸ ವಿಲೇವಾರಿ ದೊಡ್ಡ ಸವಾಲು

garbage problem
ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಹಸಿತ್ಯಾಜ್ಯ ವಿಲೇವಾರಿಗೆ ನಿರ್ಮಿಸಲಾಗಿರುವ ಕಾಂಪೋಸ್ಟ್ ಗೊಬ್ಬರ ಗುಂಡಿಯಲ್ಲಿ ತುಂಬಿರುವ ಗೊಬ್ಬರ.
Published on

* ನದಿಯ ದಡಗಳು ತ್ಯಾಜ್ಯ ತುಂಬಿ ಕಲುಷಿತ

*ಸಮಸ್ಯೆ ನಿವಾರಣೆ ಪ್ರಯತ್ನ ಲ ನೀಡಲೇ ಇಲ್ಲ

ಗಂಗಾಧರ್​ ಬೈರಾಪಟ್ಟಣ ರಾಮನಗರ

ಸಾರ್ವಜನಿಕರ ಅಸಹಕಾರ, ಆಡಳಿತ ವರ್ಗದವರ ಅಸಡ್ಡೆ ಪರಿಣಾಮ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಲ್ಲಿ ಕಸದ ವಿಲೇವಾರಿ ದೊಡ್ಡ ಸವಾಲಾಗಿದೆ ಪರಿಣಮಿಸಿದೆ.

ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿವೆಯಾದರೂ, ಸಾಧನೆ ಮಾತ್ರ ಶೂನ್ಯ. ಇದೀಗ ಮತ್ತೆ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಂಭೀರ ಚರ್ಚೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನಡೆದಿದೆ. ಆದರೆ, ಈ ಚರ್ಚೆ ಸಭೆಗೆ ಸೀಮಿತವಾಗದೇ ಕಟ್ಟು ನಿಟ್ಟಾಗಿ ಜಾರಿಗೆ ಬಂದರೆ ಖಂಡಿತವಾಗಿ ಮೂಲದಲ್ಲಿಯೇ ಸಮಸ್ಯೆಗೆ ಪರಿಹಾರ ದೊರೆಯಲಿದೆ.

ಆಸಕ್ತಿ ತೋರಲಿಲ್ಲ:

ಕಣ್ವ ಗ್ರಾಮದ ಬಳಿ ಚನ್ನಪಟ್ಟಣ ಮತ್ತು ರಾಮನಗರ ನಗರಸಭೆ ವ್ಯಾಪ್ತಿಯ ಕಸ ವಿಲೇವಾರಿಗೆ ಜಾಗವನ್ನು ನೀಡಲಾಗಿತ್ತು. ಆದರೆ, ವೈಜ್ಞಾನಿಕ ವಿಲೇವಾರಿಗೆ ಆಡಳಿತ ಯಂತ್ರ ಗಮನ ನೀಡದ ಪರಿಣಾಮ ಸ್ಥಳಿಯರ ಅಸಹಕಾರದಿಂದ ಯೋಜನೆ ಮುಚ್ಚಿತು. ಇನ್ನು ಮಾಗಡಿ ತಾಲೂಕಿನ ಸೋಲೂರು ಬಳಿ 42 ಎಕರೆ ಜಾಗವನ್ನು ಖಾಸಗಿ ಕಂಪನಿಗೆ ನೀಡಲಾಗಿತ್ತು. ಸ್ಥಳದ ಪಾವಿತ್ರ$್ಯ ಹಾಳಾಗುತ್ತದೆ ಎನ್ನುವ ಕಾರಣದಿಂದ ಗೊರೂರು ಗ್ರಾಮಸ್ಥರ ಪ್ರತಿಭಟನೆ ಯೋಜನೆ ಸ್ಥಗಿತಗೊಳ್ಳುವಂತೆ ಮಾಡಿದೆ. ಇನ್ನು ಬಿಡದಿಯಲ್ಲಿ ಎರಡು ಮೂರು ಬಾರಿ ಬಿಬಿಎಂಪಿ ಕಸ ವಿಲೇವಾರಿಗೆ ಜಾಗ ಗುರ್ತಿಸುವ ಕೆಲಸ ನಡೆದರೂ ಕಾರ್ಯರೂಪಕ್ಕೆ ಬರಲಿಲ್ಲ.

ಇದರ ನಡುವೆ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಹೊರ ರಾಜ್ಯದ ಕೇಂದ್ರಗಳಿಗೆ ಜನ ಪ್ರತಿನಿಧಿಗಳ ತಂಡ ಭೇಟಿ ನೀಡಿದ್ದು ಬಿಟ್ಟರೆ ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಆಸಕ್ತಿ ತೋರಲಿಲ್ಲ.

ಈಗ ಹೆಮ್ಮರವಾಗಿದೆ

ಬಿಬಿಎಂಪಿ ವ್ಯಾಪ್ತಿಗೆ ಸೀಮಿತವಾಗಿದ್ದ ಕಸದ ಸಮಸ್ಯೆ ರಾಮನಗರ ಜಿಲ್ಲೆಯಲ್ಲಿಯೂ ಹೆಮ್ಮರವಾಗಿ ಬೆಳೆದಿದೆ. ವಾರ್ಡ್​ಗಳಲ್ಲಿ ಕಸ ಸಂಗ್ರಹ ಮಾಡುವುದು ಕಷ್ಟ ಎನ್ನುವ ಹಂತಕ್ಕೆ ಬಂದಿದೆ. ಈಗಾಗಲೇ ನೂರಾರು ಎಕರೆಯಷ್ಟು ನದಿಯ ದಡಗಳು ಕಸದಿಂದ ತುಂಬಿ ಕಲುಷಿತವಾಗಿವೆ. ಮಾತ್ರವಲ್ಲದೆ, ಅನಿವಾರ್ಯವಾಗಿ ಹೆದ್ದಾರಿ ಪಕ್ಕದಲ್ಲಿಯೇ ಕಸವನ್ನು ತಂದು ತುಂಬುವ ಕೆಲಸ ಅಧಿಕಾರಿಗಳ ಅಡ್ಡಬುದ್ದಿ ತೋರಿಸುತ್ತಿದೆ.

ಶಾಸಕರೇ ಮುಂದಾಳತ್ವವಹಿಸಲಿ

ಕಸ ವಿಲೇವಾರಿಗೆ ವೈಜ್ಞಾನಿಕ ರೂಪ ನೀಡುವ ನಿಟ್ಟಿನಲ್ಲಿ ಶಾಸಕ ಎಚ್​.ಎ ಇಕ್ಬಾಲ್​ ಹುಸೇನ್​ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಯನ್ನು ರಾಮನಗರದಲ್ಲೂ ಜಾರಿಗೆ ತರುವಂತೆ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಈ ಯೋಜನೆಯನ್ನು ರಾಮನಗರ ನಗರ ಸೇರಿ ಜಿಲ್ಲೆಯ ಇತರ ನಗರ ಪಟ್ಟಣಗಳಲ್ಲೂ ಜಾರಿಗೆ ತರುವ ನಿಟ್ಟಿನಲ್ಲಿ ಶಾಸಕರೇ ಮುಂದಾಳತ್ವವನ್ನು ತೆಗೆದುಕೊಂಡು ಕಾರ್ಯರೂಪಕ್ಕೆ ತಂದರೆ ಖಂಡಿತವಾಗಿ ಭವಿಷ್ಯದ ಮನು ಕುಲಕ್ಕೆ ಉತ್ತಮ ಕೊಡುಗೆ ನೀಡಿದಂತೆ ಆಗುತ್ತದೆ.

ಪ್ಲಾಸ್ಟಿಕ್​ ನಿಷೇಧ ಗಂಭೀರವಾಗಲಿ

ಕಸದ ಸಮಸ್ಯೆ ಉಲ್ಬಣಗೊಳ್ಳಲು ಪ್ರಮುಖ ಕಾರಣ ಪ್ಲಾಸ್ಟಿಕ್​ನ ಅತಿಯಾದ ಬಳಕೆ. ಪ್ಲಾಸ್ಟಿಕ್​ ಬಳಕೆ ನಿಷೇಧ ಕಾಗದದಲ್ಲಿ ಇದೆಯಾದರೂ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸ್ಥಳಿಯ ಸಂಸ್ಥೆಗಳು ಗಂಭೀರವಾಗಿ ಪ್ರಯತ್ನ ಮಾಡಿದಂತೆಯೇ ಇಲ್ಲ. ಮೊದಲಿಗೆ ಪ್ಲಾಸ್ಟಿಕ್​ ಬಳಕೆ ಮಾಡುವ ಅಂಗಡಿ ಮುಂಗಟ್ಟುಗಳ ಮೇಲೆ ನಿರಂತರ ದಾಳಿಯನ್ನು ಕೈಗೊಂಡು ದಂಡ ವಿಧಿಸುವ ಕೆಲಸ ಮಾಡಿದರೆ ಖಂಡಿತವಾಗಿ ಇದರ ನಿಯಂತ್ರಣ ಸಾಧ್ಯ. ಇದರ ಜತೆಗೆ ರಾಜಕೀಯ ಮುಖಂಡರೂ ಪ್ಲಾಸ್ಟಿಕ್​ನಿಂದ ತಯಾರಾಗುವ ಬ್ಯಾನರ್​ ಬಳಸದಂತೆ ತಮ್ಮ ಕಾರ್ಯಕರ್ತರಿಗೆ ತಿಳಿವಳಿಕೆ ನೀಡುವ ಮೂಲಕ ದೊಡ್ಡ ಗಂಡಾಂತರ ತಪ್ಪಿಸಲು ಕೈ ಜೋಡಿಸಬೇಕಿದೆ.

==

ಪ್ಲಾಸಿಕ್ಟ್​ ಹಾವಳಿ ತಡೆಗೆ ಕಠಿಣ ಕ್ರಮ ಅನಿವಾರ್ಯ. ಆದರೆ, ಇದು ಯೋಜಿತವಾಗಿ ಆಗಬೇಕು. ಮೊದಲು ಜಾಗೃತಿ ಮೂಡಿಸಿ. ಎಚ್ಚರಿಕೆ ನೀಡಿದ ಬಳಿಕ ದಂಡ ಸೇರಿ ಇತರ ರೀತಿಯ ಕಾರ್ಯಾಚರಣೆ ಮಾಡಿ.> ಸುಧಾಮ ದಾಸ್​, ಎಂ.ಎಲ್​ಸಿ

===

ಪ್ಲಾಸ್ಟಿಕ್​ ಬಳಕೆ ನಿಷೇಧದಿಂದ ಕಸದ ಸಮಸ್ಯೆಗೂ ಕಡಿವಾಣ ಬೀಳಲಿದೆ. ಏಕಬಳಕೆಯ ಪ್ಲಾಸ್ಟಿಕ್​ ನಿಷೇಧವಿದ್ದರೂ ಮಾರಾಟ ಮಾಡುವವರ ವಿರುದ್ಧ ಸ್ಥಳಿಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ನಿರಂತರವಾಗಿ ದಾಳಿ ನಡೆಸಿ ದಂಡ ಹಾಕಿ. ಮೂರು ದಿನಕ್ಕೊಮ್ಮೆ ಪರಿಶೀಲನೆ ನಡೆಸುತ್ತೇನೆ.> ಯಶವಂತ್​ ವಿ. ಗುರುಕರ್​, ಜಿಲ್ಲಾಧಿಕಾರಿ

===

ಒಣ ತ್ಯಾಜ್ಯ ನಿರ್ವಹಣೆಗೆ ಜಿಲ್ಲೆಯ ವಿವಿಧೆಡೆ ಎಂಆರ್​ಎಫ್​ ಘಟಕಗಳನ್ನು ತೆರೆಯಲಾಗುವುದು. ಇದರಿಂದ, ನಗರ ಮತ್ತು ಪಟ್ಟಣದ ಮಟ್ಟದಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಸಿಗಲಿದೆ.> ದಿಗ್ವಿಜಯ್​ ಬೋಡ್ಕೆ, ಸಿಇಒ, ಜಿಲ್ಲಾ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net