

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕು ರಾಂಪುರ ಸಮೀಪದ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದು, ಬರೋಬ್ಬರಿ 4 ಕೋಟಿ ಮೌಲ್ಯದ ಗಾಂಜಾ ಸೊಪ್ಪನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂತಾಪುರ ಕೊರಚರಹಟ್ಟಿಯ ನಿವಾಸಿ ರುದ್ರೇಶ್ ಎಂಬ ವ್ಯಕ್ತಿ ಮಧ್ಯವರ್ತಿ ಮೂಲಕ ರಾಂಪುರದಲ್ಲಿ ಜಮೀನು ಗುತ್ತಿಗೆ ಪಡೆದು ಗಾಂಜಾ ಬೆಳೆದಿದ್ದ. ರಾಂಪುರದ ಜಮೀನು ಮಾಲೀಕ ಡಿ.ಬಿ.ಮಂಜುನಾಥ್, ತಿಮ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವೈ.ಜಂಬುನಾಥ್ ಹಾಗೂ ಡಿ.ವೈ.ಮಂಜುನಾಥ್ ಎಂಬುವರಿಂದ 4.20 ಎಕರೆ ಜಮೀನು ಗುತ್ತಿಗೆ ಪಡೆದು ಗಾಂಜಾ ಬೆಳೆದಿದ್ದ.
4.20 ಎಕರೆ ಜಮೀನಿನಲ್ಲಿ ಗಾಂಜಾ ಬೆಳೆ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರಾಂಪುರ ಪಿಎಸ್ಐ ಗುಡ್ಡಪ್ಪ ಮತ್ತು ಸಿಬ್ಬಂದಿ ಸೆ.4 ರಂದು ದಾಳಿ ನಡೆಸಿ ಜಮೀನು ಮಾಲೀಕರನ್ನು ಬಂಧಿಸಿದ್ದರು. ಪ್ರಮುಖ ಆರೋಪಿ ರುದ್ರೇಶ್ ಮತ್ತು ಕೂಡ್ಲಿಗಿ ತಾಲೂಕು ಮಹದೇವಪುರ ಗ್ರಾಮದ ನಿವಾಸಿ ಮಧ್ಯವರ್ತಿ ಸಮಂತಗೌಡ ತಲೆ ಮರೆಸಿಕೊಂಡಿದ್ದರು. ಅವರ ಪತ್ತೆಗೆ ಬಲೆ ಬೀಸಿದ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಐದು ಮಂದಿ ವಿರುದ್ಧ ಎನ್ಡಿಪಿಎಸ್ ಆಕ್ಟ್ ಕಲಂ 8 ಹಾಗೂ 20(ಎ) (ಬಿ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಜಮೀನಿನಲ್ಲಿ ಬೆಳೆದಿದ್ದ 9871.73 ಕೆಜಿ ತೂಕದ ಅಂದಾಜು 4 ಕೋಟಿ ಮೌಲ್ಯದ 8250 ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಎಸ್ಪಿ ಜಿ.ರಾಧಿಕಾ ಬಹುಮಾನ ಘೊಷಿಸಿದರು.