ದೋಸ್ತಿಗೆ ಜೈ, ಕಮಲಕ್ಕೆ ಬೈ

vote
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಗಂಗೊಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಹದಿನೈದು ವರ್ಷಗಳ ಬಳಿಕ ಬಿಜೆಪಿ ಭದ್ರಕೋಟೆ ಭೇದಿಸುವಲ್ಲಿ ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಬೆಂಬಲಿತರು ಯಶಸ್ವಿಯಾಗುವ ಮೂಲಕ ಅಧಿಕಾರದ ಚುಕಾಣಿ ಹಿಡಿಯಲಿದ್ದಾರೆ.

ಜಿಲ್ಲೆಯಲ್ಲೇ ಹಿಂದುತ್ವದ ಪ್ರಬಲ ಗ್ರಾಮ ಎಂದು ಬಿಂಬಿತವಾಗಿದ್ದ ಗಂಗೊಳ್ಳಿಯ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿ ಹೀನಾಯವಾಗಿ ಸೋತಿದೆ. ಈ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲಿ ಶೂನ್ಯ ಸಾಧನೆ ಮಾಡಿದ್ದು, 6 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಶೂನ್ಯ ಸಾಧನೆ ಮಾಡಿದೆ. ಈ ನಡುವೆ ಬಿಜೆಪಿ ಹಿಡಿತದಲ್ಲಿದ್ದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಪಾರುಪತ್ಯ ಸ್ಥಾಪಿಸಿ ಅಚ್ಚರಿಗೊಳಿಸಿದೆ.

ಒಟ್ಟು 8 ಕ್ಷೇತ್ರಗಳ 33 ಸ್ಥಾನಗಳಿಗೆ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಜತೆಯಾಗಿ ಸ್ಪರ್ಧಿಸಿದ್ದರೆ, ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ನಡೆಸಿತ್ತು. ತಲಾ 12 ಬಿಜೆಪಿ ಅಭ್ಯರ್ಥಿಗಳು ಹಾಗೂ 12 ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಉಳಿದ 7 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ನಡುವೆ ಇಬ್ಬರು ಬಿಜೆಪಿ ಬಂಡಾಯ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಪ್ರತಿ ಬಾರಿ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗುತ್ತಿದ್ದ ಎಸ್‌ಡಿಪಿಐ ಈ ಬಾರಿ ಕೈ ಪಾಳಯದೊಂದಿಗೆ ದೋಸ್ತಿ ಮಾಡಿಕೊಂಡು ಗೆಲುವು ಸಾಧಿಸಿದ್ದು ವಿಶೇಷ. ಕಳೆದ ಆಡಳಿತದ ಅವಧಿಯಲ್ಲಿ 23 ಬಿಜೆಪಿ ಬೆಂಬಲಿತರು, 6 ಕಾಂಗ್ರೆಸ್ ಬೆಂಬಲಿತರು ಮತ್ತು ನಾಲ್ವರು ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ಕೈ-ಎಸ್ಡಿಪಿಐ ವಿಜಯೋತ್ಸವ

ಗೆದ್ದ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಬೆಂಬಲಿತರೊಂದಿಗೆ ತಡರಾತ್ರಿ ಭರ್ಜರಿ ವಿಜಯೋತ್ಸವ ನಡೆಸಿ ಸಂಭ್ರಮಿಸಿದರು.

ಬಿಜೆಪಿಗೆ ಶಾಪವಾದ ಒಳಜಗಳ?

ಬಿಜೆಪಿ ನಾಯಕರ ಒಳಜಗಳ, ಮುಖಂಡರ ಒಣಪ್ರತಿಷ್ಠೆ, ಸ್ಥಳೀಯ ಹಿರಿಯ ಮುಖಂಡರ ಕಡೆಗಣನೆ ಸೇರಿದಂತೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಟ್ಟುಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಮುಳುವಾಗಿ ಪರಿಣಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net