ಕಾಮಗಾರಿ ಸ್ಥಗಿತಕ್ಕಾಗಿ ಹೆ.ಬ.ವೇದಿಕೆ ಪ್ರತಿಭಟನೆ
ಎಲಿವೇಟೆಡ್ ಫ್ಲೈಓವರ್ ನಿರ್ಮಾಣಕ್ಕೆ ಆಗ್ರಹ
ವಿಜಯವಾಣಿ ಸುದ್ದಿಜಾಲ ಉಡುಪಿ
ಅಂಬಲಪಾಡಿ ಜಂಕ್ಷನ್ನಲ್ಲಿ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿ ಪರ-ವಿರೋಧದ ವೇದಿಕೆ ಸೃಷ್ಟಿಯಾಗಿದ್ದು, ಕೆಲಸ ಆರಂಭಗೊಂಡ ಮಾರನೇ ದಿನವೇ ಹೆದ್ದಾರಿ ಬಳಕೆದಾರರ ವೇದಿಕೆ ಅಂಬಲಪಾಡಿ, ಉಡುಪಿ ಕಾರ್ಯಕರ್ತರು ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.
ಅಂಬಲಪಾಡಿ ಜಂಕ್ಷನ್ನಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲೇ ಪ್ರತಿಭಟಿಸಿ, ಪ್ರಸ್ತುತ ಆರಂಭಗೊಂಡಿರುವ ಅಂಡರ್ಪಾಸ್ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಎಲಿವೇಟೆಡ್ ಫ್ಲೈಓವರ್ ನಿರ್ಮಿಸುವಂತೆ ಆಗ್ರಹಿಸಿ ಕೆಲಕಾಲ ಘೋಷಣೆ ಕೂಗಿದರು.
ಮೀನು ಸಾಗಾಟಕ್ಕೆ ತೊಂದರೆ
ವೇದಿಕೆಯ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಈ ಅವೈಜ್ಞಾನಿಕ ಸೇತುವೆ ನಿರ್ಮಾಣಗೊಂಡಲ್ಲಿ ಸಾವಿರಾರು ಮೀನುಗಾರಿಕಾ ಕುಟುಂಬಗಳಿರುವ ಮಲ್ಪೆ ಬಂದರಿನ ಮೇಲೆ ನೇರ ದುಷ್ಪರಿಣಾಮ ಬೀರಲಿದೆ. ಈಗಾಗಲೇ ಮಲ್ಪೆ-ಹೆಬ್ರಿ ರಸ್ತೆ ಕಾಮಗಾರಿಯೂ ನಡೆಯುತ್ತಿದ್ದು, ಅಂಬಲಪಾಡಿ ಜಂಕ್ಷನ್ನಲ್ಲೂ ಕಾಮಗಾರಿ ಕೈಗೆತ್ತಿಕೊಂಡರೆ ಮೀನು ಸಾಗಾಟಕ್ಕೆ ಅತೀವ ಸಮಸ್ಯೆಯಾಗುತ್ತದೆ. ಕಾಮಗಾರಿ ನಡೆಸುತ್ತಿರುವ ಬಗ್ಗೆ ಈವರೆಗೂ ಸ್ಥಳದಲ್ಲಿ ಯಾವುದೇ ಮಾಹಿತಿ, ದಾಖಲೆ ಇಲ್ಲ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದರು.
ಪ್ರವಾಸೋದ್ಯಮಕ್ಕೂ ಹಿನ್ನಡೆ
ಮೀನುಗಾರಿಕಾ ಮುಖಂಡ ಕಿಶೋರ್ ಡಿ. ಸುವರ್ಣ ಮಾತನಾಡಿ, ಸಂತೆಕಟ್ಟೆಯಲ್ಲಿ ರಸ್ತೆ ಕಾಮಗಾರಿ, ಮಲ್ಪೆ-ತೀರ್ಥಹಳ್ಳಿ ಕಾಮಗಾರಿಯೂ ಕುಂಠಿತವಾಗಿದ್ದು ಅಭಿವೃದ್ಧಿಗೆ ತೊಡಕಾಗಿದೆ. ಇಲ್ಲಿನ ಯಾವ ಹೆದ್ದಾರಿಯಲ್ಲೂ ವಾಹನ ಸಂಚಾರ ಸರಾಗವಾಗಿಲ್ಲ. 50 ಸಾವಿರಕ್ಕೂ ಅಧಿಕ ಮೀನುಗಾರರಿಗೆ ಅಂಬಲಪಾಡಿ ಜಂಕ್ಷನ್ ಕಾಮಗಾರಿಯಿಂದ ತೊಂದರೆಯಾಗಲಿದೆ. ಪ್ರವಾಸೋದ್ಯಮಕ್ಕೂ ಹಿನ್ನಡೆಯಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಜಯಂತ್ ಅಮೀನ್ ಕೋಡಿ, ಮಾಜಿ ಅಧ್ಯಕ್ಷ ರಾಜೇಂದ್ರ ಹಿರಿಯಡ್ಕ, ವಿನಯ್ ಕರ್ಕೇರ, ಮುಖಂಡರಾದ ದಯಾನಂದ ಕೆ., ರಮೇಶ್ ಕೋಟ್ಯಾನ್ ಹರಿಯಪ್ಪ ಕೋಟ್ಯಾನ್ ಜಯಕರ್ ವಿ. ಸುವರ್ಣ, ರವೀಶ್ ಎಸ್., ಮಂಜು ಕೊಳ ಇತರರಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು.
ಉಡುಪಿಯನ್ನು ಇಬ್ಭಾಗ ಮಾಡಬೇಡಿ
ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷ ಶಿವರಾಮ ಕೋಟ ಮಾತನಾಡಿ, ಈ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾದ ಕಾಲದಲ್ಲಿ ನಾವು ಮುಂದಿನ ನೂರಾರು ವರ್ಷದ ಯೋಜನೆ ಹಾಕಬೇಕು. ಅದರ ಬದಲಾಗಿ ಅಂಡರ್ ಪಾಸ್ ನಿರ್ಮಿಸುವ ಮೂಲಕ ನಾವಿನ್ನೂ ಹಿಂದುಳಿದಿದ್ದೇವೆ ಎಂದು ಬಿಂಬಿಸುವಂತಿದೆ. ಹೆದ್ದಾರಿಯಲ್ಲಿ ದಂಡೆ ನಿರ್ಮಿಸಿ ಪೇಟೆಯ ಇಬ್ಭಾಗ ಮಾಡಿ ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ ತೊಂದರೆ ಕೊಡಬೇಡಿ. ಯಾರದೋ ನಾಲ್ಕು ಜನರ ಹಿತಕ್ಕಾಗಿ ಕಾಮಗಾರಿ ವಿರೋಧಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಯಾವುದೇ ಅಭಿವೃದ್ಧಿ ಕಾರ್ಯದ ವಿರುದ್ಧ ನಮ್ಮ ಹೋರಾಟವಲ್ಲ. ಉಡುಪಿಯನ್ನು ಇಬ್ಭಾಗ ಮಾಡುವ ಈ ಅವೈಜ್ಞಾನಿಕ ಕಾಮಗಾರಿಗಷ್ಟೇ ನಮ್ಮ ವಿರೋಧ ವೈಜ್ಞಾನಿಕವಾಗಿ ಪಿಲ್ಲರ್ ನಿರ್ಮಿಸಿ ಮೇಲ್ಸೇತುವೆ ನಿರ್ಮಿಸಿ ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.
ಶಾಸಕರು, ಸಂಸದರು, ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಸಭೆ ಕರೆದು ಸೂಕ್ತ ಮಾಹಿತಿ ನೀಡಬೇಕು. ಅಂಡರ್ಪಾಸ್ ನಿರ್ಮಾಣದ ಬದಲು ಎಲಿವೇಟೆಡ್ ಫ್ಲೈಓವರ್ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಹೋರಾಟ ಇನ್ನೂ ತೀವ್ರಗೊಳ್ಳಲಿದೆ.
| ಜಯ ಸಿ. ಕೋಟ್ಯಾನ್. ಅಧ್ಯಕ್ಷ, ಹೆದ್ದಾರಿ ಬಳಕೆದಾರರ ವೇದಿಕೆ, ಅಂಬಲಪಾಡಿ
ಕೆಲಸ ನಿಲ್ಲಿಸಲು ಜಿಲ್ಲಾಡಳಿತದಿಂದ ಆಗದು
* ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸ್ಪಷ್ಟನೆ
ಉಡುಪಿ: ಅಂಬಲಪಾಡಿ ಜಂಕ್ಷನ್ನಲ್ಲಿ ಆರಂಭಗೊಂಡಿರುವ ಅಂಡರ್ಪಾಸ್ ಕಾಮಗಾರಿ ನಿಲ್ಲಿಸಲು ಜಿಲ್ಲಾಡಳಿತದಿಂದ ಸಾಧ್ಯವಿಲ್ಲ. ಅದಕ್ಕೆ ನಮಗೆ ಅವಕಾಶವೂ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸ್ಪಷ್ಟಪಡಿಸಿದ್ದಾರೆ.
ಅಂಬಲಪಾಡಿ ಜಂಕ್ಷನ್ನಲ್ಲಿ ತರಾತುರಿಯಲ್ಲಿ ಆರಂಭಗೊಂಡಿರುವ ಅಂಡರ್ಪಾಸ್ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ, ಕಾಮಗಾರಿ ನಿಲ್ಲಿಸುವಂತೆ ಸೂಚಿಸಲು ಮಂಗಳವಾರ ಸಂಜೆ ಮನವಿ ನೀಡಲು ಬಂದ ಹೆದ್ದಾರಿ ಬಳಕೆದಾರರ ವೇದಿಕೆ ಅಂಬಲಪಾಡಿಯ ಸದಸ್ಯರಿಗೆ ಡಿಸಿ ವಿದ್ಯಾಕುಮಾರಿ ಪ್ರತಿಕ್ರಿಯಿಸಿದರು.
ಯೋಜನೆಯ ಪಾರದರ್ಶಕತೆ ತಿಳಿಸಿ
ಉಡುಪಿಯ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಅಂಬಲಪಾಡಿ ಅಂಡರ್ಪಾಸ್ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕ ವಲಯದಿಂದ ನಮಗೂ ದೂರು ಬರುತ್ತಿದೆ. ಪ್ರಾಜೆಕ್ಟ್ ಇಂಜಿನಿಯರ್ ಕರೆಸಿ ಯೋಜನೆಯ ಪಾರದರ್ಶಕತೆಯ ಕುರಿತು ಸ್ಪಷ್ಟನೆ ಕೊಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಡಿಸಿ ಪ್ರತಿಕ್ರಿಯಿಸಿ, ಎನ್ಎಚ್ ರೀಜನಲ್ ಮೆನೇಜರ್ ಅವರಿಂದ ಮಾಹಿತಿ ಪಡೆದು ತಿಳಿಸುವುದಾಗಿ ಭರವಸೆ ನೀಡಿದರು.

ಕೇಂದ್ರ ಸರ್ಕಾರದ ಪ್ರಾಜೆಕ್ಟ್
ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಹಿಂದೆಯೇ ಕಾಮಗಾರಿ ಕುರಿತಂತೆ ಕಾರ್ಯಾದೇಶವಾಗಿದೆ. ಹೀಗಾಗಿಯೇ ಗುತ್ತಿಗೆದಾರರು ಕೆಲಸ ಆರಂಭಿಸಿದ್ದಾರೆ. ಈ ಹಂತದಲ್ಲಿ ಕಾಮಗಾರಿ ನಿಲ್ಲಿಸಲು ಆಗದು. ಈ ವಿಷಯವನ್ನು ಈಗಾಗಲೇ ಸಾರ್ವಜನಿಕರ ಅವಗಾಹನೆಗೆ ನೀಡಲಾಗಿದೆ. ವರ್ಷದ ಹಿಂದೆಯೇ ಕಾಮಗಾರಿ ಸಂಬಂಧಿಸಿ ಯೋಜನಾ ವರದಿಗಳೆಲ್ಲ ತಯಾರಿಯಾದ ಬಳಿಕವೇ ಕಾಮಗಾರಿ ಆರಂಭವಾಗಿದೆ ಎಂದರು.
ಜಯ ಸಿ.ಕೋಟ್ಯಾನ್, ಕಿಶೋರ್ ಮಲ್ಪೆ, ಹರಿಯಪ್ಪ ಕೋಟ್ಯಾನ್ ಇತರರು ಇದ್ದರು.