

ಗಂಗಾವತಿ: ತುಂಗಭದ್ರಾ ಎಡದಂಡೆ ವಿತರಣೆ ಕಾಲುವೆಯಲ್ಲಿ ಸಂಗ್ರಹವಾದ ಹೂಳನ್ನು ರೈತರೇ ಸ್ವಂತ ಖರ್ಚಿನಲ್ಲಿ ತೆರವುಗೊಳಿಸುತ್ತಿದ್ದಾರೆ.
ತಾಲೂಕಿನ ಶ್ರೀರಾಮನಗರ ವ್ಯಾಪ್ತಿಯ 25ನೇ ವಿತರಣೆ ಕಾಲುವೆಯಲ್ಲಿ ಹೂಳು ತುಂಬಿದ್ದು, ಕೆಲವೆಡೆ ತ್ಯಾಜ್ಯ ಹಾಕಲಾಗಿದೆ. ಕಾಲುವೆಗೆ ನೀರು ಹರಿಸುವ ಮುನ್ನವೇ ಹೂಳು ತೆರವುಗೊಳಿಸುವಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ.
ಹೀಗಾಗಿ ಶ್ರೀರಾಮನಗರ, ಮುಷ್ಟೂರು ಮತ್ತು ಢಣಾಪುರ ಗ್ರಾಪಂ ವ್ಯಾಪ್ತಿಯ ರೈತರು ಹಣ ಸಂಗ್ರಹಿಸಿ ಹೂಳು ತೆರವು ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಜೆಸಿಬಿ ಮೂಲಕ ಹೂಳು ತೆಗೆಸುತ್ತಿದ್ದು, ರೈತರೇ ಉಸ್ತುವಾರಿವಹಿಸಿಕೊಂಡಿದ್ದಾರೆ.
ನೇತೃತ್ವವಹಿಸಿದ್ದ ಎಪಿಎಂಸಿ ಮಾಜಿ ಸದಸ್ಯ ರೆಡ್ಡಿ ಶ್ರೀನಿವಾಸ ಮಾತನಾಡಿ, ಬಿತ್ತನೆ ವಿಳಂಬವಾಗಿದ್ದು, ರಾಸಾಯನಿಕ ಗೊಬ್ಬರ ದರ ಏರಿಕೆಯಾಗಿದೆ. ವಿತರಣೆ ಕಾಲುವೆಯಲ್ಲಿ ಹೂಳಿನಿಂದ ಟೇಲ್ಯಾಂಡ್‌ವರೆಗೆ ನೀರು ಬರಲ್ಲ. 25 ಕಿಮೀ ವರೆಗೆ ಹೂಳು ತೆರವುಗೊಳಿಸಲು ನಿರ್ಧರಿಸಿದ್ದು, ರೈತರು ಒಗ್ಗಟ್ಟಾಗಿದ್ದಾರೆ.
ಹೂಳು ತೆರವಿಗೆ ಪ್ರತ್ಯೇಕ ಅನುದಾನ ನೀಡಲು ಡಿಸಿಎಂ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಗೆ ಮನವಿ ಮಾಡಲಾಗಿದೆ ಎಂದರು.
ರೈತರಾದ ಕರಟೂರಿ ಶ್ರೀನಿವಾಸ, ವಿಜಯದೊನ್ನೆಪುಡಿ, ಸಂಭವಮೂರ್ತಿ, ಶ್ರೀನಿವಾಸ, ಸುರೇಶ್, ನಿಂಗಪ್ಪ, ಹೇಮಸುಂದರಾವ್, ಉಮೇಶ್, ಶರಣಪ್ಪ, ಚನ್ನಬಸವ, ರಾಮಮೂರ್ತಿ ಇತರರಿದ್ದರು.