ನೀರಿಗಿದೆ ನಾಗರಿಕತೆ ಅರಳಿಸುವ ಶಕ್ತಿ : ಗುರುರಾಜ್ ಅಭಿಮತ : ರಾಮಕುಂಜ ಅಮೈಯಲ್ಲಿ ಕೆರೆಗೆ ಗಂಗಾರತಿ

New Project (46)
Published on

ಕಡಬ: ರಾಮಕುಂಜ ಗ್ರಾಮ ವಿಕಾಸ ಸಮಿತಿ, ಶ್ರೀ ರಾಮಕುಂಜೇಶ್ವರ ದೇವಸ್ಥಾನ, ರಾಮಕುಂಜ ಗ್ರಾ.ಪಂ. ಶಾರದಾನಗರ, ಶಾರದಾ ಭಜನಾ ಮಂದಿರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಗೋಳಿತ್ತೊಟ್ಟು ವಲಯ ಮತ್ತು ಊರವರ ಸಹಯೋಗದೊಂದಿಗೆ ರಾಮಕುಂಜ ಅಮೈ ಕೆರೆಯಲ್ಲಿ ಗಂಗಾ ಆರತಿ ನಡೆಯಿತು.

ಗ್ರಾಮ ವಿಕಾಸ ಅಖಿಲ ಭಾರತ ಸಂಯೋಜಕ ಗುರುರಾಜ್ ಮಾತನಾಡಿ, ಊರಿನ ಕೆರೆಯನ್ನು ಗಂಗೆಯ ಸ್ವರೂಪದಲ್ಲಿ ಕಂಡಿದ್ದೇವೆ. ಗಂಗಾ ಆರತಿ ವರ್ಷದ ಕಾರ್ಯಕ್ರಮ ಅಲ್ಲ, ದಿನ-ದಿನದ ಕಾರ್ಯಕ್ರಮ. ನೀರಿಗೆ ನಾಗರಿಕತೆಯನ್ನು ಅರಳಿಸುವ ಶಕ್ತಿ ಇದೆ ಎಂದರು.

ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಗ್ರಾ.ಪಂ. ಅಧ್ಯಕ್ಷೆ ಸುಚೇತಾ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೋಳಿತ್ತೊಟ್ಟು ವಲಯ ಮೇಲ್ವಿಚಾರಕ ಜಯಶ್ರೀ ಪ್ರಸ್ತಾವಿಸಿ ಸ್ವಾಗತಿಸಿದರು. ಹರ್ಷಿತ್ ನೇರೆಂಕಿ ದೇಶ ಭಕ್ತಿಗೀತೆ ಹಾಡಿದರು. ರಾಮಚಂದ್ರ ಹೂಂತಿಲ ಪ್ರಾರ್ಥಿಸಿದರು. ಗ್ರಾಮ ವಿಕಾಸ ಕಡಬ ತಾಲೂಕು ಸಂಯೋಜಕ ಜನಾರ್ದನ ಕದ್ರ ವಂದಿಸಿದರು. ಮಹೇಶ್ ಹಳೆನೇರೆಂಕಿ ನಿರೂಪಿಸಿದರು.

ಕೆರೆಗೆ ಆರತಿ: ಅಮೈ ಕೆರೆಯ ಸುತ್ತ ಹಣತೆ ದೀಪ ಹಚ್ಚಲಾಯಿತು. ಗ್ರಾಮದ ಮನೆಯವರು ತಮ್ಮ ಮನೆಯಿಂದ 1 ಕಲಶ ನೀರು ತಂದು ಕೆರೆಗೆ ಅರ್ಪಿಸಿದರು. ಬಳಿಕ ಹಣತೆಯ ದೀಪದ ಬೆಳಕಿನಲ್ಲಿ ಅಮೈ ಕೆರೆಗೆ ಗಂಗಾ ಆರತಿ ನಡೆಯಿತು. ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಅರ್ಚಕ ಶ್ರೀನಿಧಿ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನಡೆಯಿತು. ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net