ಈ ಊರಲ್ಲಿ ಕಾರ್ತೀಕ ಮಾಸದಲ್ಲಿ ಗಣೇಶೋತ್ಸವ

Guluru_Ganesha
Published on

ತುಮಕೂರು: ಈ ಊರಲ್ಲಿ ಗಣೇಶ ಚೌತಿ ಬದಲು ಕಾರ್ತೀಕ ಮಾಸದಲ್ಲಿ ಗಣೇಶೋತ್ಸವ ನಡೆಯಲಿದೆ. ಕಾರ್ತೀಕ ಮಾಸದಲ್ಲಿ ಗೂಳೂರಿನಲ್ಲಿ 1 ತಿಂಗಳು ಗಣೇಶ ಉತ್ಸವ ನಡೆಯುವುದು ವಿಶೇಷ. ಬಲಿಪಾಡ್ಯಮಿಯಂದು ಗಣೇಶಮೂರ್ತಿಗೆ ಕಣ್ಣುಧಾರಣೆ ಮಾಡಲಾಗುವುದು. ಅಂದಿನಿಂದ 1 ತಿಂಗಳವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.

ಇಲ್ಲಿ ಗಣೇಶ ಚೌತಿಯಂದು ಗಣೇಶ ಮೂರ್ತಿ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಆಯುಧಪೂಜೆ, ವಿಜಯದಶಮಿ ಹೊತ್ತಿಗೆ ಗಣೇಶ ಮೂರ್ತಿ ಒಂದು ಆಕಾರಕ್ಕೆ ಬರಲಿದೆ. ಆ ಸಂದರ್ಭದಲ್ಲಿ ಅದರ ನಾಬಿಯೊಳಗೆ ಚಿಕ್ಕಗಣಪತಿ ಕೂರಿಸಲಾಗುವುದು. ಕಾರ್ತೀಕ ಪಾಡ್ಯ ಪ್ರಾರಂಭವಾಗುವ ವೇಳೆಗೆ ಸರ್ವಾಲಂಕಾರ ಭೂಷಿತನಾಗಿ ರೂಪಗೊಳ್ಳುವ ಗಣಪತಿಗೆ ಬಲಿಪಾಡ್ಯಮಿಯಂದು ಬೆಳಗ್ಗೆ ಶುಭ ಮಹೂರ್ತದಲ್ಲಿ ದೃಷ್ಟಿ ಧಾರಣೆ ಮೂಲಕ ಪ್ರಥಮ ಪೂಜೆಗೆ ಅಣಿಗೊಳಿಸಲಾಗುವುದು. ಅಲ್ಲಿಂದ ಆರಂಭವಾಗುವ ಗಣೇಶ ಉತ್ಸವ 1 ತಿಂಗಳ ನಡೆಯಲಿದೆ.

ಈ ವರ್ಷ ನ.16 ರಿಂದ ಡಿ.20ರವರೆಗೆ ಗಣೇಶೋತ್ಸವ ಜರುಗಲಿದೆ. 1 ತಿಂಗಳ ಕಾಲ ಗಣೇಶಮೂರ್ತಿಗೆ ನಿತ್ಯ ವಿಶೇಷ ಪೂಜೆ ನಡೆಯಲಿದೆ. ಡಿ.19 ರಂದು ರಾತ್ರಿ ಶ್ರೀ ಮಹಾಗಣಪತಿ ಸ್ವಾಮಿ ಉತ್ಸವ ಜರುಗಲಿದೆ. ಡಿ.20 ರಂದು ಸಂಜೆ 5ಕ್ಕೆ ಗೂಳೂರು ಕೆರೆಯಲ್ಲಿ ಗಣೇಶಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು.

10 ಅಡಿ ಎತ್ತರ 5 ಅಡಿ ಅಗಲದ ಬೃಹತ್ ಗಣೇಶ ಮೂರ್ತಿಗೆ ವಿಶೇಷ ಐತಿಹ್ಯವಿದ್ದು 1 ತಿಂಗಳ ಕಾಲ ಗ್ರಾಮದ ಒಂದೊಂದು ಮನೆಯವರು ಒಂದೊಂದು ದಿನ ವಿಶೇಷ ಪೂಜೆ ಸಲ್ಲಿಸುವರು. ಪ್ರತಿ ದಿನ ರಾತ್ರಿ 9 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. 18 ಕೋಮಿನವರು ಗೂಳೂರು ಗಣಪನಿಗೆ ವಿವಿಧ ಸೇವೆ ಸಲ್ಲಿಸುವುದು ಪ್ರತೀಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net