

ಅಭಿಲಾಷ್ ತಿಟ್ಟಮಾರನಹಳ್ಳಿ
ಚನ್ನಪಟ್ಟಣ: ಉಪಚುನಾವಣೆ ಹಿನ್ನೆಲೆಯಲ್ಲಿ ಬೊಂಬೆನಾಡು ಚನ್ನಪಟ್ಟಣದಲ್ಲಿ ಮತ್ತೆ ಗಣೇಶ ಪಾಲಿಟಿಕ್ಸ್ ಆರಂಭಗೊಂಡಿದೆ. ಉಚಿತ ಗಣೇಶ ಮೂರ್ತಿ ವಿತರಿಸುವ ಮೂಲಕ ಯುವಸಮುದಾಯದ ಮನಸ್ಸು ಗೆಲ್ಲಲು ರಾಜಕಾರಣಿಗಳು ಪ್ಲಾನ್ ರೂಪಿಸಿದ್ದಾರೆ.
ಹೌದು.., ವಕ್ರತುಂಡ, ಮೋದಕಪ್ರೀಯ ಗಣೇಶನ ಹಬ್ಬ ಎಂದರೆ ಯುವಸಮುದಾಯಕ್ಕೆ ಎಲ್ಲಿಲ್ಲದ ಸಡಗರ. ಗಣೇಶ ಪ್ರತಿಷ್ಠಾಪನೆ ಮಾಡಿ ಅದನ್ನು ವಿಸರ್ಜನೆ ಮಾಡುವ ತನಕ ಅವರ ಸಂಭ್ರಮಕ್ಕೆ ಪಾರವೇ ಇಲ್ಲ. ಸದ್ಯ ಈ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಉಪಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಈ ಹಬ್ಬಕ್ಕೆ ಸಾಥ್ ನೀಡುವ ಮೂಲಕ ಯುವ ಸಮುದಾಯದ ಮನಸ್ಸು ಗೆಲ್ಲಲು ತಾಲೂಕಿನ ರಾಜಕಾರಣಿಗಳು ಮುಂದಾಗಿದ್ದಾರೆ.
ಉಚಿತ ಗಣೇಶ ಮೂರ್ತಿ ವಿತರಣೆ!
ಗಣೇಶ ಹಬ್ಬ ಬಂತು ಅಂದರೆ ಎಲ್ಲೆಲ್ಲೂ ವಿವಿಧ ಬಗೆಯ ಗಣೇಶ ಮೂರ್ತಿಗಳದ್ದೇ ಕಾರುಬಾರು. ನೂರು- ಸಾವಿರ ರುಪಾಯಿಯಿಂದ ಆರಂಭವಾಗಿ ಲಕ್ಷದ ತನಕ ಗಣೇಶ ಮೂರ್ತಿಗಳ ಬೆಲೆ ಇರುತ್ತದೆ. ಗಣೇಶ ಪ್ರತಿಷ್ಟಾಪನೆ ಮಾಡುವವರು ಹಣವನ್ನು ಹೊಂದಿಸಿ, ಗಣೇಶ ಮೂರ್ತಿ ಖರೀದಿಸಲು ಸಾಕಷ್ಟು ಸರ್ಕಸ್ ನಡೆಸುತ್ತಾರೆ. ಇಂತಹ ಸಂದರ್ಭದಲ್ಲಿ ತಾಲೂಕಿನ ಜನತೆಗೆ ಉಚಿತ ಗಣೇಶ ಮೂರ್ತಿ ವಿತರಿಸಲು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ಮುಂದಾಗಿದ್ದಾರೆ. ಇಬ್ಬರು ತಲಾ ಒಂದು ಸಾವಿರ ಗಣೇಶಮೂರ್ತಿ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ನೋದಂಣಿ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಇಬ್ಬರ ಮಧ್ಯೆ ಕಾಂಗ್ರೆಸ್ ನಾಯಕರು ಸಹ ಗಣೇಶೋತ್ಸವಕ್ಕೆ ಸಹಾಯಹಸ್ತ ಚಾಚಲು ಯೋಜನೆ ರೂಪಿಸಿದ್ದಾರೆ.
ಇದೇ ಮೊದಲಲ್ಲ!
ಅಂದಹಾಗೇ ಈ ಉಚಿತ ಗಣೇಶ ಮೂರ್ತಿ ವಿತರಣೆ ಇದೇ ಮೊದಲಲ್ಲ. ೨೦೦೯ ರಿಂದಲೂ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ತಮ್ಮ ತಾಯಿ ಚೆನ್ನಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಗಣೇಶ ಮೂರ್ತಿ ವಿತರಣೆ ನಡೆಸಿಕೊಂಡು ಬರುತ್ತಿದ್ದಾರೆ. ಕೋವಿಂಡ್ ಹಿನ್ನೆಲೆಯಲ್ಲಿ ಎರಡು ವರ್ಷ ಈ ಕಾರ್ಯಕ್ರಮ ಕೈಬಿಡಲಾಗಿತ್ತು. ತದನಂತರ ೨೦೨೨ ರಲ್ಲಿ ಮತ್ತೆ ಮೂರ್ತಿ ವಿತರಣೆ ಕಾರ್ಯಕ್ರಮ ಮುಂದುವರೆಸಿದರು. ಇದೇ ವರ್ಷ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಸಹ ಗಣೇಶ ಮೂರ್ತಿಯನ್ನು ನೀಡುವ ಮೂಲಕ ಗಣೇಶೋತ್ಸವಕ್ಕೆ ತಾವೂ ಕೂಡ ಸಾಥ್ ನೀಡಿದರು. ಆದರೆ, ೨೦೨೩ ರಲ್ಲಿ ಇಬ್ಬರೂ ಸಹ ಈ ಕಾರ್ಯಕ್ರಮ ಮಾಡಿರಲಿಲ್ಲ. ಇದೀಗ, ಉಪಚುನಾವಣೆಗೆ ದಿನಗಣನೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಈ ಇಬ್ಬರು ಮತ್ತೆ ಗಣೇಶನ ಮೊರೆ ಹೋಗುತ್ತಿರುವುದು ವಿಶೇಷ.
ಗಣೇಶನಿಗೂ ಪಕ್ಷದ ಲೇಬಲ್ ಫಿಕ್ಸ್?
ಸಿ.ಪಿ.ಯೋಗೇಶ್ವರ್ ಹಾಗೂ ಎಚ್.ಸಿ. ಜಯಮುತ್ತು ತಲಾ ಒಂದು ಸಾವಿರ ಗಣೇಶ ಮೂರ್ತಿ ವಿತರಿಸಲು ಸಜ್ಜಾಗಿದ್ದು, ತಾಲೂಕಿನ ಪ್ರತಿಹಳ್ಳಿ ಹಾಗೂ ನಗರದ ಪ್ರದೇಶದ ಹಲವಾರು ಕಡೆ ಮೂರ್ತಿ ವಿತರಿಸಲು ಯೋಜನೆ ರೂಪಿಸಿದ್ದಾರೆ. ಪ್ರತಿಗ್ರಾಮಗಳಲ್ಲೂ ಈ ಇಬ್ಬರು ನಾಯಕರು ನೀಡುವ ಮೂರ್ತಿಗಳು ಪ್ರತಿಷ್ಠಾಪನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಗಣೇಶನಿಗೂ ಪಕ್ಷದ ಲೇಬಲ್ ಅಂಟಿಕೊಳ್ಳುವುದು ಗ್ಯಾರಂಟಿ ಎನ್ನಬಹುದು. ಇದು ಜೆಡಿಎಸ್ ಗಣೇಶ, ಇದು ಬಿಜೆಪಿ ಗಣೇಶ ಎನ್ನುವ ಮಾತು ಸಾಮಾನ್ಯವಾಗಲಿದೆ. ಇದರ ಮಧ್ಯೆ ಕಾಂಗ್ರೆಸ್ ಕೂಡ ಗಣೇಶೋತ್ಸವಕ್ಕೆ ಸಹಕಾರ ನೀಡಲು ಯೋಜನೆ ರೂಪಿಸುತ್ತಿದ್ದು, ಒಟ್ಟಾರೆ, ಉಪಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿಯ ಗಣೇಶೋತ್ಸವಕ್ಕೆ ಮತ್ತಷ್ಟು ಕಳೆಬರಲಿದೆ.
ಕೋಟ್-೧
ಹಲವಾರು ವರ್ಷಗಳಿಂದ ಗೌರಿಗಣೇಶ ಹಬ್ಬಕ್ಕೆ ಉಚಿತವಾಗಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಗಣೇಶನ ಮೂರ್ತಿಗಳನ್ನು ವಿತರಣೆ ಮಾಡುತ್ತಿದ್ದೇನೆ. ಕೋವಿಂಡ್ ಹಿನ್ನೆಲೆಯಲ್ಲಿ ಎರಡು ವರ್ಷ ಮೂರ್ತಿ ವಿತರಣೆ ರದ್ದುಗೊಳಿಸಿದ್ದೇವು. ಕಳೆದ ವರ್ಷ ಅನಿವಾರ್ಯ ಕಾರಣಗಳಿಂದ ನೀಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಮತ್ತೆ ಪ್ರಾರಂಭ ಮಾಡಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಕಾರಣಗಳು ಇಲ್ಲ. ಈ ಹಿಂದಿನಂತೆ ಈಗಲೂ ಮಾಡಿಕೊಂಡು ಹೋಗುತ್ತಿದ್ದೇನೆ ಅಷ್ಟೇ.
- ಎಚ್.ಸಿ.ಜಯಮುತ್ತು , ತಾಲೂಕು ಜೆಡಿಎಸ್ ಅಧ್ಯಕ್ಷ.
ಕೋಟ್-೨
ಗಣೇಶಹಬ್ಬ ಎಂದರೆ ಅದೊಂದು ಸಂಭ್ರಮ. ಗಣೇಶೋತ್ಸವದ ಹಿನ್ನೆಲೆ ಬಹಳ ಮಹತ್ವವಾಗಿದೆ. ಹಬ್ಬದ ಸಂಭ್ರಮದಲ್ಲಿ ನಾವೂ ಸಹ ಭಾಗಿಯಾಗಬೇಕು ಎಂಬ ಉದ್ದೇಶದಿಂದ ಗಣೇಶ ಮೂರ್ತಿ ವಿತರಿಸುತ್ತಿದ್ದೇನೆ. ಇದರಲ್ಲಿ ಚುನಾವಣೆ ರಾಜಕೀಯ ಇಲ್ಲ. ಈ ಹಿಂದೆಯೂ ಒಂದು ಬಾರಿ ಮೂರ್ತಿಗಳನ್ನು ನೀಡಿದ್ದೇವು. ಈಗ ಅದನ್ನು ಮತ್ತೆ ಮುಂದುವರೆಸುತ್ತಿದ್ದೇನೆ.
- ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ.