

ಕೆ.ಆರ್.ಪೇಟೆ: ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ತಾಲೂಕಿನಾದ್ಯಂತ ಶನಿವಾರ ಸುಮಾರು 500ಕ್ಕೂ ಅಧಿಕ ಕಡೆಗಳಲ್ಲಿ ವಿವಿಧ ಸಂಘ -ಸಂಸ್ಥೆಗಳು, ಯುವಕರ ಗುಂಪು ಸಾರ್ವಜನಿಕ ಸ್ಥಳಗಳಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಅದ್ದೂರಿಯಾಗಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು.
ಪೊಲೀಸ್ ಇಲಾಖೆಯೂ ಹಬ್ಬದ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಿದೆ. ಹಬ್ಬದ ಅಂಗವಾಗಿ ಗೌರಿ, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದರೊಂದಿಗೆ ನಿತ್ಯ ಪೂಜೆಗಳು ನಡೆಯಲಿವೆ. ಕೆಲವು ಸಮಿತಿಗಳು ಪ್ರತಿಷ್ಠಾಪನೆ ಮಾಡಿದ ದಿನವೇ ವಿಸರ್ಜನೆ ಮಾಡುತ್ತವೆ. ಕೆಲವರು ಹಲವು ದಿನ ಪ್ರತಿಷ್ಠಾಪಿಸಿ ನಂತರ ವೈಭವದ ಮೆರವಣಿಗೆ ನಡೆಸಿ ದೇವರ ಮೂರ್ತಿಗಳನ್ನು ವಿಸರ್ಜಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅನ್ನದಾನ, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದೇಗುಲಗಳಲ್ಲಿ ವಿಶೇಷ ಪೂಜೆ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಶನಿವಾರ ತಾಲೂಕಿನ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ದೇವಾಲಯದಲ್ಲಿ ಬೆಳಗ್ಗಿನಿಂದಲೇ ಅಭಿಷೇಕ, ಅಲಂಕಾರ, ಅರ್ಚನೆ, ಹೋಮ ಹವನಾದಿ ವಿಶೇಷ ಪೂಜೆಗಳು ನಡೆದವು.
ಗಣೇಶ ಪ್ರತಿಷ್ಠಾಪನೆಗೆ ಆರ್ಥಿಕ ನೆರವು:
ತಾಲೂಕಿನಾದ್ಯಂತ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪಿಸುವ ಯುವಕರ ಗುಂಪು, ಸಂಘ-ಸಂಸ್ಥೆಗಳಿಗೆ ಶಾಸಕ ಎಚ್.ಟಿ.ಮಂಜು, ಮನ್ಮುಲ್ ನಿರ್ದೇಶಕ ಡಾಲು ರವಿ, ಸಮಾಜ ಸೇವಕ ಮಲ್ಲಿಕಾರ್ಜುನ್ ಅವರು ಆರ್ಥಿಕ ನೆರವು ನೀಡುತ್ತಿದ್ದಾರೆ.
ಪ್ರತಿ ಗಣೇಶ ಪ್ರತಿಷ್ಠಾಪನೆಗೆ ಐದು ಸಾವಿರ ರೂ., ಸಾಂಸ್ಕೃತಿಕ( ಆರ್ಕೆಸ್ಟ್ರಾ) ಕಾರ್ಯಕ್ರಮಕ್ಕೆ ಹತ್ತು ಸಾವಿರ ರೂ.ನೀಡುತ್ತಿದ್ದಾರೆ. ಆರ್ಥಿಕ ನೆರವು ಪಡೆಯಲು ಪ್ರತಿಷ್ಠಾಪಕ ಗುಂಪು ಅವರ ಮನೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು.