

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಶ್ರೀ ವಿದ್ಯಾರಣ್ಯ ಯುವಕ ಸಂಘದ ವತಿಯಿಂದ 63ನೇ ಬೆಂಗಳೂರು ಗಣೇಶ ಉತ್ಸವ ಅದ್ದೂರಿ ಆಚರಣೆ ಆ.27 ರಿಂದ ಸೆ.6ರ ವರೆಗೆ ಆಯೋಜಿಸಲಾಗಿದೆ.
ಭಕ್ತಿ, ಸಂಗೀತ, ಕಲೆ, ಆಹಾರ ಹಾಗೂ ಸಂಸತಿಯ ಮೆರವಣಿಗೆ ನಡೆಸಲು ಬೆಂಗಳೂರು ಸಿದ್ಧಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಗಣೇಶ ಉತ್ಸವವು ದಕ್ಷಿಣ ಭಾರತದ ಅತ್ಯಂತ ಪ್ರಮುಖ ಸಾಂಸತಿಕ ಹಬ್ಬವಾಗಿ ಮಾರ್ಪಟ್ಟಿದ್ದು, ವಿಶಿಷ್ಟವಾದ ಆಧ್ಯಾತ್ಮಿಕ ಹಾಗೂ ಕಲಾತ್ಮಕ ಅನುಭೂತಿಯನ್ನು ಪಡೆಯಲು ಸಾವಿರಾರು ಜನರು ಆಗಮಿಸುತ್ತಿದ್ದಾರೆ.
ಈ ವರ್ಷದ ಗಣೇಶೋತ್ಸವವನ್ನು 11 ದಿನಗಳ ಕಾಲ ಅದ್ದೂರಿ ಸಾಂಸತಿಕ ಯಾತ್ರೆಯ ರೂಪದಲ್ಲಿ ಆಚರಿಸಲು ಆಯೋಜಕರು ನಿರ್ಧರಿಸಿದ್ದಾರೆ. ಎಪಿಎಸ್ ಕಾಲೇಜು ಮೈದಾನ ಹಾಗೂ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಎಂ.ಡಿ.ಪಲ್ಲವಿ, ಲಕ್ಷಿ$್ಮ ಮತ್ತು ಇಂದು ನಾಗರಾಜ್, ಸೂರ್ಯಗಾಯತ್ರಿ, ಸುನೀತಾ ಉಪದೃಷ್ಟ, ಪಂಡಿತ್ ವೆಂಕಟೇಶ ಕುಮಾರ್, ವಿನಯ್ ವಾರಾಣಸಿ ಹಾಗೂ ಬಾಲ ಕಲಾವಿದೆ ಗಂಗಾ ಶಶಿಧರನ್ ಮುಂತಾದ ಸುಪ್ರಸಿದ್ಧ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಎಲ್ಲಾ ದಿನವೂ ಸಂಜೆಯ ಬಳಿಕ ಭಕ್ತಿ ಸಂಗೀತದ ಜತೆಗೆ ಬೆಂಗಳೂರಿನ ಯುವಕರ ಆಸಕ್ತಿಯನ್ನು ತಣಿಸುವ ಆಧುನಿಕ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆ.31 ರಂದು ಸಾವಿರಾರು ಮಹಿಳೆಯರು ಏಕಕಾಲಕ್ಕೆ ಗಣೇಶ ಪಂಚರತ್ನ ಶ್ಲೋಕಗಳನ್ನು ಪಠಿಸುತ್ತಾ ಮೆರವಣಿಗೆಯಲ್ಲಿ ಸಾಗುವ ಆಧ್ಯಾತ್ಮಿಕ ಅನುಭೂತಿಯ ಸಾಮೂಹಿಕ ಕಾರ್ಯಕ್ರಮ ಎಪಿಎಸ್ ಕಾಲೇಜಿನಲ್ಲಿ ಆರಂಭವಾಗಿ ಡಿವಿಜಿ ರಸ್ತೆಯ ಮೂಲಕ ಸಾಗಿ ಗಾಂಧಿ ಬಜಾರ್ ವೃತ್ತದಲ್ಲಿ ಕೊನೆಗೊಳ್ಳಲಿದೆ.
ಆಹಾರೋತ್ಸವ: ಸಂಗೀತ ಹಾಗೂ ನೃತ್ಯದ ಹೊರತಾಗಿ ಆಹಾರ ಪ್ರಿಯರಿಗೆ "ಆರೋಮಾಸ್ ಆಫ್ ಕರ್ನಾಟಕ' ಆಹಾರೋತ್ಸವ 10 ದಿನಗಳ ಕಾಲ ಆಯೋಜನೆಗೊಂಡಿದೆ. ಗಣೇಶೋತ್ಸವಕ್ಕೆ ಆಗಮಿಸುವವರು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ, ಪೂರ್ವ ಕರ್ನಾಟಕ ಸೇರಿ ರಾಜ್ಯದ ಎಲ್ಲ ಭಾಗಗಳ ವಿಶಿಷ್ಟವಾದ ರುಚಿಕರ ಆಹಾರವನ್ನು ಸವಿಯಬಹುದು.
ಪರಿಸರಸ್ನೇಹಿ ಉತ್ಸವ
ಬೆಂಗಳೂರು ಗಣೇಶೋತ್ಸವವು ಯಾವಾಗಲೂ ಪರಿಸರಸ್ನೇಹಿ ತತ್ವವನ್ನು ಪಾಲಿಸುತ್ತದೆ. ಈ ವರ್ಷವೂ ಗಣೇಶೋತ್ಸವವು ಪ್ಲಾಸ್ಟಿಕ್ ಮುಕ್ತವಾಗಿರಲಿದೆ. ಗಣೇಶನ ಮಂಟಪವು ಮಣ್ಣಿನಲ್ಲಿ ಕರಗುವ ವಸ್ತುಗಳಿಂದಲೇ ನಿರ್ಮಿಸಲ್ಪಡುತ್ತದೆ. ಅದರಲ್ಲಿ ಪ್ರತಿಷ್ಠಾಪಿಸುವ ಗಣೇಶನ ಮೂರ್ತಿಯನ್ನು ಮರುಬಳಕೆ ಮಾಡಲಾಗುತ್ತದೆ. ಕೊನೆಯ ದಿನ ಮುಳುಗಿಸಲು ಮಣ್ಣಿನ ಸಾಂಕೇತಿಕ ಮೂರ್ತಿಯನ್ನು ಬಳಸಲಾಗುತ್ತದೆ. ಸೆ.6ರಂದು ಗಣಪತಿ ವಿಸರ್ಜನೆಯ ಮೆರವಣಿಗೆ ನಡೆಯಲಿದೆ. ಅದ್ದೂರಿ ಮೆರವಣಿಗೆ ಬಸವನಗುಡಿಯಲ್ಲಿ ಸಾಗಲಿದ್ದು, ಅದರೊಂದಿಗೆ 11 ದಿನಗಳ ಉತ್ಸವ ಮುಕ್ತಾಯವಾಗಲಿದೆ.
ವಿಶೇಷ ಆಕರ್ಷಣೆ
* 11 ದಿನಗಳ ಸಂಭ್ರಮಾಚರಣೆ
* 2 ಸ್ಥಳಗಳಲ್ಲಿ ಕಾರ್ಯಕ್ರಮ
* 50ಕ್ಕೂ ಅಧಿಕ ಕಲಾವಿದರು
* ರವಿಚಂದ್ರನ್, ವಿಜಯ್ ಪ್ರಕಾಶ್, ರು ದೀತ್, ರಾಜೇಶ್ ಕೃಷ್ಣನ್, ವಿಜಯ್ ಯೇಸುದಾಸ್ ಮುಂತಾದವರು ಭಾಗಿ