

ನಗರದಲ್ಲಿ ೫೦ ಜಿಲ್ಲೆಯಲ್ಲಿ ೧೨೧ ಗಣೇಶ ವಿಗ್ರಹ ವಿಸರ್ಜನೆ | ಮಳೆಯ ಸಿಂಚನದೊಂದಿಗೆ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಯುವಪಡೆ | ಎಲ್ಲಡೆ ಭಾರಿ ಬೀಗಿ ಪೊಲೀಸ್ ಬಂದೋಬಸ್ತ್
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಗಣಪತಿಯ ಹಬ್ಬದ ಅಂಗವಾಗಿ ಕಲಬುರಗಿ ನಗರ ಮತ್ತು ಜಿಲ್ಲೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಸಾರ್ವಜನಿಕ ಸ್ಥಳಗಳಲ್ಲಿ ವಿಘ್ನೇಶ್ವರ ವಿಗ್ರಹಗಳ ವಿಸರ್ಜನೆ ಪ್ರಕ್ರಿಯೆ ಗಣೇಶೋತ್ಸವದ ಹನ್ನೊಂದನೆ ದಿನವಾದ ಗುರುವಾರ ರಾತ್ರಿಯಿಡಿ ಭರ್ಜರಿಯಾಗಿ ಜರುಗಿತು. ಈ ಮೂಲಕ ಏಕದಂತನಿಗೆ ತುಂತುರು ಮಳೆಯ ಸಿಂಚನ ದೊಂದಿಗೆ ಭಕ್ತಿಯ ವಿದಾಯ ಹೇಳಲಾಯಿತು. ಇನ್ನೂ ೨೧ನೇ ದಿನದ ಪ್ರತಿಷ್ಠಾಪಿಸಿರುವ ನಾಲ್ಕ ವಿಗ್ರಹಗಳ ವಿಸರ್ಜನೆ ಮಾತ್ರ ಉಳಿದುಕೊಂಡಿವೆ.
ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿನ ೫೦ ಹಾಗೂ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ೧೧ ತಾಲೂಕುಗಳಲ್ಲಿನ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಿದ್ದ ೧೨೧ ವಿಗ್ರಹಗಳನ್ನು ಗುರುವಾರ ರಾತ್ರಿಯಿಂದ ಶುಕ್ರವಾರ ನಸುಕಿನ ಜಾವದರೆಗೂ ಜರ‍್ದಾರ್ ಮೆರವಣಿಗೆ ತಂದು ಸಂಪ್ರದಾಯದAತೆ ವಿಸರ್ಜಿಸುವ ಕಾರ್ಯ ಮಾಡಲಾಯಿತು. ನಗರ ಪೊಲೀಸ್ ಆಯುಕ್ತ ಚೇತನ ಆರ್, ಡಿಸಿಪಿ ಕನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ನಗರದಲ್ಲಿ ಹಾಗೂ ಎಸ್ಪಿ ಅಡ್ಡೂರು ಶ್ರೀನಿವಾಸುಲು ನೇತೃತ್ವದಲ್ಲಿ ಜಿಲ್ಲೆಯ ಎಲ್ಲಡೆ ಭಾರಿ ಕಟ್ಟೆಚ್ಚರ ವಹಿಸಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬಹುತೇಕ ಎಲ್ಲಡೆ ಗಣೇಶ ಮೆರವಣಿಗೆ ಶಾಂತಿಯುತವಾಗಿತ್ತು. ಪತ್ರಿಕೆ ಅಚ್ಚಿಗೆ ಹೋಗುವವರೆಗೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ನಗರದದ ವಿವಿಧ ಕಡೆಗಳಲ್ಲಿ ಗಣೇಶ ಚತುರ್ಥಿಯ ನಿಮಿತ್ತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮಂಡಳಿ ಹಾಗೂ ತರುಣ ಸಂಘದವರು ಪ್ರತಿಷ್ಠಾಪಿಸಿದ್ದ ವಿಘ್ನ ನಿವಾರಕನಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಕೈಗೊಳ್ಳುವ ಮೂಲಕ ಮೆರವಣಿಗೆ ಶುರುಗೊಂಡವು. ತಮ್ಮ ಬಡಾವಣೆಗಳಿಂದ ಸೂಪರ್ ಮಾರ್ಕೇಟ್ ಪ್ರದೇಶದಲ್ಲಿರುವ ಚೌಕ್ ವೃತ್ತಕ್ಕೆ ಆಗಮಿಸಿದವು. ಅಲ್ಲಿ ಗಣೇಶ ಮಹಾಮಂಡಳಿಯ ಅಧ್ಯಕ್ಷ ಶಶೀಲ್ ನಮೋಶಿ ಇನ್ನಿತರ ಸದಸ್ಯರು ಎಲ್ಲ ಮಂಡಳಿಯವರಿಗೆ ಕಾಯಿ, ಎಲೆ ನೀಡಿ ಗೌರವಿಸಿದರು. ಅಧಿಕಾರಿಗಳು, ಗಣ್ಯರು ಕಾರ್ಯ್ಕಕ್ರಮಕ್ಕೆ ಸಾಕ್ಷಿಯಾದರು.
ನಗರದ ಎಲ್ಲೆಡೆ ಯುವಕರು ಬ್ಯಾಂಜೋ ಮತ್ತು ಹಾಡುಗಳನ್ನು ಹಾಕಿಕೊಂಡು ನೃತ್ಯ ಮಾಡಿ ಸಂಭ್ರಮಿಸಿದರು. ನಗರದ ಸೂಪರ್ ಮಾರ್ಕೇಟ್, ಬಸ್ ನಿಲ್ದಾಣ, ನೆಹರು ಗಂಜ್, ಸೇಡಂ ರಸ್ತೆ, ಆಳಂದ ರಸ್ತೆ, ಜೇವರ್ಗಿ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ವಿಗ್ರಹಗಳಿಗೆ ವಿದಾಯ ಹೇಳಲಾಯಿತು. ಗಣೇಶ ಮೆರವಣಿಗೆ ನೋಡಲು ಜನರು ರಸ್ತೆಯ ಇಕ್ಕೆಲದಲ್ಲಿ ಜಮಾಗೊಂಡಿದ್ದರು.