ಗೌರಿ ಗಣೇಶ ಹಬ್ಬದ ಪ್ರಯುಕ್ತ: KKRTC 290 ಹೆಚ್ಚುವರಿ ಬಸ್‍ಗಳ ಕಾರ್ಯಾಚರಣೆ

Dr. Sushila Yadagiri Dc
Published on
ಕಲಬುರಗಿ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕ.ಕ.ರ.ಸಾ ನಿಗಮದಿಂದ ಇದೇ ಆಗಸ್ಟ್ 21 ರಿಂದ 25ರವರೆಗೆ ಕ.ಕ.ರ.ಸಾ.ನಿಗಮದ ತಾಲ್ಲೂಕು/ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಮತ್ತು ಇತರೆ ಪ್ರಮುಖ ಸ್ಥಳಗಳಿಗೆ ಹಾಗೂ  ಆಗಸ್ಟ್ 22, 23, 25 ಮತ್ತು 26 ರಂದು ಬೆಂಗಳೂರಿನಿಂದ ಕ.ರಾ.ರ.ಸಾ.ನಿಗಮದ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ದೈನಂದಿನ ಕಾರ್ಯಾಚರಣೆಯಲ್ಲಿರುವ 199 ಸಾರಿಗೆಗಳನ್ನು ಹೊರತುಪಡಿಸಿ, 290 ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ  ಮಾಡಲಾಗುತ್ತಿದ್ದು, ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆ ಸೌಲಭ್ಯದ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು Dr Sushila ತಿಳಿಸಿದ್ದಾರೆ.
     ಹಬ್ಬ ಮುಗಿದ ನಂತರ ಆಗಸ್ಟ್ 27 ರಿಂದ 30 ರ ವರೆಗೆ ಕ.ಕ.ರ.ಸಾ ನಿಗಮದ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಿಂದ ಬೆಂಗಳೂರು ಮತ್ತು ಇತರೆ ಸ್ಥಳಗಳಿಗೆ ಸಂಚಾರ ದಟ್ಟಣೆಗನುಗುಣವಾಗಿ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಕರ್ನಾಟಕ ಹಾಗೂ ಅಂತರ ರಾಜ್ಯದಲ್ಲಿ ಇರುವ 18 ಗಣಕೀಕೃತ ಬುಕ್ಕಿಂಗ್ ಕೌಂಟರ್‍ಗಳ ಮುಖಾಂತರ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.
      ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ ಅಪ್ ಪಾಯಿಂಟ್‍ನ ಹೆಸರನ್ನು ಗಮನಿಸಬೇಕು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ. 5 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ. 10 ರಿಯಾಯಿತಿ ನೀಡಲಾಗುತ್ತದೆ. ಅಲ್ಲದೇ, ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲಾ ತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net