

ಮದ್ದೂರು: ಗಾಂಧೀಜಿ ಅವರ ಅಹಿಂಸಾತ್ಮಕ ತತ್ವಗಳು ವಿಶ್ವಮಾನ್ಯತೆ ಪಡೆದಿದ್ದು, ಪ್ರತಿಯೊಬ್ಬರೂ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಚ್.ಕೆ.ವೀರಣ್ಣಗೌಡ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಕೆ ಮರಿಯಪ್ಪ ಹೇಳಿದರು.
ಪಟ್ಟಣದ ಶಿವಪುರ ಧ್ವಜಸತ್ಯಾಗ್ರಹ ಸೌಧದಲ್ಲಿ ಎಂ.ಎಚ್.ಚನ್ನೇಗೌಡ ವಿದ್ಯಾನಿಲಯ ಹಾಗೂ ಎಚ್.ಕೆ. ವೀರಣ್ಣಗೌಡ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸೋಮವಾರ ಆಯೋಜಿಸಿದ್ದ 154ನೇ ಗಾಂಧಿ ಜಯಂತಿ ಮತ್ತು 119ನೇ ಲಾಲ್ ಬಹಾದುರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಧ್ವಜರೋಹಣ ನೆರವೇರಿಸಿ ಅವರು ಮಾತನಾಡಿದರು.
ಗಾಂಧೀಜಿ ದೇಶದ ಒಳಗೆ ಹಾಗೂ ಹೊರಗೆ ಅಹಿಂಸಾತ್ಮಕ ಪ್ರತಿರೋಧದ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸಿ ಸರಳತೆ ಮತ್ತು ಸ್ವಾವಲಂಬನೆಯ ಮೂಲಕ ಜಾಗತಿಕವಾಗಿ ಪ್ರಭಾವ ಬೀರಿದ್ದಾರೆ. ಗಾಂಧೀಜಿ ಅವರ ಮಾರ್ಗದರ್ಶನವನ್ನು ಪಡೆದಂತಹ ಭಾರತೀಯರಾದ ನಾವು ಧನ್ಯರು ಎಂದು ಹೇಳಿದರು.
ಲಾಲ್ ಬಹಾದುರ್ ಶಾಸ್ತ್ರಿ ಅವರು ಸರಳ ವ್ಯಕ್ತಿತ್ವದಿಂದ ದೇಶವನ್ನಾಳಿ, ರಕ್ಷಣೆಯಲ್ಲಿ ದಿಟ್ಟ ತೀರ್ಮಾನಗಳನ್ನು ತೆಗೆದುಕೊಂಡಿರುವುದು ಇಂದಿನ ನಾಯಕರಿಗೆ ಮಾದರಿಯಾಗಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು, ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಅಧ್ಯಕ್ಷ ಎಂ.ಸ್ವರೂಪ್ ಚಂದ್, ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಅಮೆರಿಕದ ಖ್ಯಾತ ವೈದ್ಯರಾದ ಡಾ.ಎಚ್.ಜಿ.ಏಕನಾಥ್, ಗೀತಾ ಏಕನಾಥ್, ಡಾ.ಬಿ.ಎಂ.ರಾಮ್, ಡಾ.ಅಂಜನಾ ಕುಮಾರಿ, ಸಾರ್ವಜನಿಕ ವಿದ್ಯಾಸಂಸ್ಧೆಯ ಅಧ್ಯಕ್ಷ ಜಯಮುದ್ದಪ್ಪ, ಭೈರಮಂಗಲ ರಾಮೇಗೌಡ, ಪ್ರಾಂಶುಪಾಲರಾದ ಜಿ.ಎಸ್. ಶಂಕರೇಗೌಡ, ಯು.ಎಸ್. ಶಿವಕುಮಾರ್, ಉಪಪ್ರಾಂಶುಪಾಲರಾದ ಪ್ರಕಾಶ್, ಜಿ.ಎಸ್.ನಂದಿನಿ, ಮುಖ್ಯ ಶಿಕ್ಷಕರಾದ ಎನ್.ಕೃಷ್ಣ, ಎಂ.ಟಿ.ಚಂದ್ರಶೇಖರ್, ಕೆ.ಎನ್. ವರದರಾಜು, ಆಡಳಿತಾಧಿಕಾರಿ ಯು.ಎಸ್. ರವಿ, ಎಚ್.ಎಸ್.ಪಂಚಲಿಂಗೇಗೌಡ, ಎ.ವಿ.ಪ್ರದೀಪ್ ಇದ್ದರು.