ಸತ್ಯಾನ್ವೇಷಣೆಯ ಮಾರ್ಗದರ್ಶಿ ಗಾಂಧೀಜಿ; ಗೊ.ರು.ಚನ್ನಬಸಪ್ಪ ಅಭಿಮತ

goruch
Published on

ಬೆಂಗಳೂರು: ಸತ್ಯಾನ್ವೇಷಣೆಗಾಗಿ ಬದುಕನ್ನೇ ಮುಡುಪಾಗಿಟ್ಟ ಮಹಾತ್ಮ ಗಾಂಧೀಜಿಯವರ ಕುರಿತು ಹೆಚ್ಚೆಚ್ಚು ತಿಳಿಯಬೇಕಾದ ಸಂದರ್ಭದಲ್ಲಿ ಅನ್ವೇಷಣೆ ಸಾಹಿತ್ಯ ಪತ್ರಿಕೆಯು ಮಹಾತ್ಮ ಗಾಂಧೀಜಿ ಕುರಿತಾಗಿ ವಿಶೇಷ ಸಂಚಿಕೆಯನ್ನು ಹೊರತರುತ್ತಿರುವುದು ಸಂತೋಷದ ಸಂಗತಿ ಎಂದು ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಹೇಳಿದರು.

ರಾಜರಾಜೇಶ್ವರಿನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಅನ್ವೇಷಣೆ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕಳೆದ ಮೂರ್ನಾಲ್ಕು ದಶಕಗಳಿಂದ ಅನ್ವೇಷಣೆ ಹೊರ ಬರುತ್ತಿದ್ದು ಮೌಲಿಕ ಲೇಖನ, ವಿಮರ್ಶೆಗಳನ್ನೊಳಗೊಂಡಿದೆ. ಸಾಹಿತ್ಯ ಪತ್ರಿಕೆಗಳು ನಿಜವಾದ ಸಾಹಿತ್ಯ ಸಂಸ್ಕೃತಿಯನ್ನು ಕಾಪಾಡಬೇಕು ಎಂದು ಇದೇ ವೇಳೆ ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಎಲ್ಲೆಲ್ಲೂ ಯುದ್ಧದ ದಾಹ ಹರಡುತ್ತಿರುವಾಗ ಶಾಂತಿ ಅತ್ಯಗತ್ಯವಾಗಿದ್ದು, ಜನಪ್ರಿಯ ಮಾಧ್ಯಮಗಳು, ಸಾಹಿತ್ಯಿಕ ಪತ್ರಿಕೆಗಳು ಸದಾ ಶಾಂತಿವಾಹಿನಿಗಳಾಗಬೇಕು. ಅಹಿಂಸೆ, ಸತ್ಯಾಗ್ರಹದ ಸಾಕ್ಷಿಪ್ರಜ್ಞೆಯ ಗಾಂಧೀಜಿಯವರ ಕುರಿತಾಗಿ ಅನ್ವೇಷಣೆ ವಿಶೇಷ ಸಂಚಿಕೆ ತಂದಿರುವುದು ಅಭಿನಂದನೀಯ ಎಂದರು.

ಈ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕ ಆರ್.ಜಿ. ಹಳ್ಳಿ ನಾಗರಾಜ, ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ, ಕವಿ ಗುಂಡೀಗೆರೆ ವಿಶ್ವನಾಥ್, ಶರಣಸಾಹಿತ್ಯ ಪರಿಷತ್ತು ಮಾಜಿ ಕಾರ್ಯದರ್ಶಿ ಚಿಕ್ಕರಿಯಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net