ಬೆಂಗಳೂರು; ಕನ್ನಡ ಭಾಷೆಯನ್ನು ಹೆಚ್ಚೆಚ್ಚು ಬಳಸುವುದರ ಮೂಲಕ ಭಾಷೆ ಸಮೃದ್ಧವಾಗಿ ಬೆಳೆಯುತ್ತದೆ.
ಅದರಿಂದ ಶಾಶ್ವತವಾಗಿ ಕನ್ನಡವನ್ನು ಉಳಿಸಿಕೊಳ್ಳಬಹುದು ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಹೇಳಿದ್ದಾರೆ.
ತಾಯಿಬೇರು ಸಾಮಾಜಿಕ ಮತ್ತು ಸಾಂಸ್ಕೃತಿಕ ಯುವ ವೇದಿಕೆ ವಿವಿಪುರದ ಸಿಲ್ವರ್ ಜ್ಯುಬಿಲಿ ಬಯಲು ಸಭಾಂಗಣದಲ್ಲಿ ಆಯೋಜಿಸಿದ್ದ ತಾಯಿಬೇರು ದೇಸಿ ಸಂಸ್ಕೃತಿ ಉತ್ಸವ ಮತ್ತು ಸುವರ್ಣ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಜಗತ್ತಿನ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಭಾಷೆಗೆ ಒಂದು ಭವ್ಯ ಪರಂಪರೆ ಇದೆ, ಭಾರತದಲ್ಲಿ ಸುಮಾರು ಆರುವರೆ ಸಾವಿರ ಭಾಷೆಗಳಿದ್ದವು. ಆದರೆ ಇಂದು ಆ ಸಂಖ್ಯೆ ಮೂರು ಸಾವಿರಕ್ಕೆ ಇಳಿದಿದೆ; ಕಾರಣ ಭಾಷೆಯ ಬಳಕೆ ಇಲ್ಲದಿರುವಿಕೆ. ಕನ್ನಡ ಆ ಮೂರು ಸಾವಿರ ಜೀವಂತ ಭಾಷೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಕ್ಲಾಸಿಕಲ್ ಭಾಷೆ.
ಸ್ಥಳೀಯ ಭಾಷೆಯಲ್ಲಿನ ಸೊಗಡನ್ನು ಹೆಚ್ಚೆಚ್ಚು ಬಳಸುವುದರ ಜೊತೆಗೆ ಅನ್ಯ ಭಾಷೆಯ ಅನವಶ್ಯಕ ಶಬ್ದಗಳ ಉಪಯೋಗ ನಿಲ್ಲಿಸಬೇಕು. ಇಂಗ್ಲಿಷ್ ಹಿಂದಿ ಮಾತನಾಡುವುದೆ ಮೇಲೆರಿಮೆ ಎಂಬ ಅಜ್ಞಾನ ಕನ್ನಡಿಗರಿಗೆ ಹೆಚ್ಚಾಗಿದೆ. ದಾಸ ಸಾಹಿತ್ಯ, ವಚನ ಸಾಹಿತ್ಯ, ಕನ್ನಡದ ಗಾದೆ, ನುಡಿಗಟ್ಟನ್ನು ಸಾಧ್ಯವಾದಷ್ಟು ಆಡುಭಾಷೆಯಲ್ಲಿ ಬಳಸಿ ಮಾತನಾಡಿದರೆ ಮಾತುಗಳನ್ನು ಮತ್ತುಷ್ಟು ಹೊತ್ತು ಕೇಳಲು ಕಿವಿಗಳು ತೆರದುಕೊಳ್ಳುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಚಂದ್ರಶೇಖರ್,
ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೆ.ನಾಗರಾಜು. ವಿ.ವಿ.ಎನ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವೇಣುಗೋಪಾಲ್, ತಾಯಿಬೇರು ಸಂಸ್ಥೆಯ ಅಧ್ಯಕ್ಷ ಜಗದೀಶ್, ಜನಪದ ವಿದ್ವಾಂಸ ಡಾ. ನಾಗೇಶ್ ಕೆ.ಎನ್. ಮತ್ತಿತರರು ಉಪಸ್ಥಿತರಿದ್ದರು.