

ತುಮಕೂರು: ಸತ್ಯದ ಮೇಲೆ ಸಮಾಜ ನಿಂತಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ "ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜನ್ಮ ದಿನಾಚರಣೆ' ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ಸತ್ಯದ ಮಾರ್ಗ ಪ್ರತಿಯೊಬ್ಬರ ಸಂಗಾತಿಯಾಗಬೇಕು. ಇತ್ತೀಚೆಗೆ ಸಮಾಜದಲ್ಲಿ ಸತ್ಯವನ್ನು ದುರ್ಬಲಗೊಳಿಸಲಾಗುತ್ತಿರುವುದು ವಿಪರ್ಯಾಸ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾರ ನಂಬಿಕೆ ಇಟ್ಟಿದ್ದ ಗಾಂಧೀಜಿ ದೇಶದ ಪ್ರತಿಯೊಬ್ಬ ಪ್ರಜೆಯು ಯಾವುದೇ ಜಾತಿ, ಧರ್ಮವಿರಲಿ ಮೂಲತ ಭಾರತೀಯನಾಗಿರಬೇಕು. ದೇಶ ಕಟ್ಟುವಲ್ಲಿ ಪ್ರತಿ ಪ್ರಜೆಯ ಪಾತ್ರವಿರಬೇಕು. ಅವರ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ದೇಶದ ಅಡಿಪಾಯ ಮತ್ತಷ್ಟು ಭದ್ರವಾಗುತ್ತದೆ. ಗಾಂಧೀಜಿ, ಶಾಸ್ತ್ರೀಜಿ ಅವರು ದೇಶದಲ್ಲಿ ಜಾತಿ ರಹಿತ, ವರ್ಗ ರಹಿತ ಸಮಾಜ ಕಟ್ಟುವ ವಿಶ್ವಾಸ ಹೊಂದಿದ್ದರು. ಕೆಳಸ್ತರದ ಹರಿಜನರನ್ನು ದೇವರ ಮಕ್ಕಳು ಎಂದು ಕರೆದ ಗಾಂಧೀಜಿ ಸ್ವದೇಶಿ ಉತ್ಪನ್ನಗಳನ್ನು ಬಳಸಬೇಕು. ವಿದೇಶಿ ಉತ್ಪನ್ನಗಳನ್ನು ಬಳಸಬಾರದೆಂದು ಖಾದಿ ಬಟ್ಟೆಯನ್ನು ತೊಟ್ಟು ದೇಶ ಪ್ರೇಮವನ್ನು ಮೆರೆದರು ಎಂದು ತಿಳಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ. ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಸರಳ ಜೀವನ, ಅಹಿಂಸೆ, ಸತ್ಯ, ಶಾಂತಿ, ತತ್ವಾದರ್ಶಗಳು ಸೂರ್ಯ-ಚಂದ್ರ ಇರುವವರೆಗೂ ಪ್ರಸ್ತುತವಾಗಿರುತ್ತವೆ. ಈ ಮಹನೀಯರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ. ಯಾರ ಮನಸ್ಸಿಗೂ ನೋವುಂಟು ಮಾಡಬಾರದೆಂಬ ಅವರ ಅಹಿಂಸಾ ಮಾರ್ಗವನ್ನು ಸಂಯುಕ್ತ ರಾಷ್ಟ್ರಗಳು ಒಪ್ಪಿಕೊಂಡು ಗಾಂಧೀ ಜಯಂತಿ ಅ.2ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದ್ದು, ಗಾಂಧೀಜಿ ನಮ್ಮವರು ಎನ್ನಲು ಹೆಮ್ಮೆಯಾಗುತ್ತಿದೆ ಎಂದು ಪರಮೇಶ್ವರ ಹೇಳಿದರು.
ಗಾಂಧೀಜಿಯವರಲ್ಲಿದ್ದ ನಡೆ-ನುಡಿ, ಬದ್ಧತೆ, ದೂರದೃಷ್ಟಿ ಗುಣಗಳು ಪ್ರಪಂಚದ ಯಾವುದೇ ದೇಶದ ನಾಯಕರಿಗೆ ಹೋಲಿಸಲು ಸಾಧ್ಯವಿಲ್ಲ. ಅವರ ಹುಟ್ಟು, ವಿದ್ಯಾಭ್ಯಾಸ, ದೇಶದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಗಳ ಕುರಿತು ಪುಸ್ತಕಗಳಿಂದ ತಿಳಿದುಕೊಂಡಿದ್ದೇವೆ. ಸುಮಾರು 2500 ವರ್ಷಗಳ ಹಿಂದೆ ಭಗವಾನ್ ಬುದ್ಧನು ಸತ್ಯಾನ್ವೇಷಣೆಗಾಗಿ ತನ್ನ ಚಕ್ರವರ್ತಿ ಸ್ಥಾನವನ್ನೇ ತ್ಯಾಗ ಮಾಡಿದಂತೆ ಗಾಂಧೀಜಿಯವರೂ ಸಹ ಸತ್ಯ, ಅಹಿಂಸೆ, ಶಾಂತಿ, ದೇಶದ ಸ್ವಾತಂತ್ರ$್ಯ ಹೋರಾಟಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದರು.ಗಾಂಧೀ ತತ್ವಗಳು ಭಾರತಕ್ಕೆ ಮಾತ್ರ ಸೀಮಿತವಲ್ಲ. ಇಡೀ ವಿಶ್ವಕ್ಕೆ ಮಾದರಿಯಾಗಿದೆ. ತುಮಕೂರು ಜಿಲ್ಲೆಗೂ ಸ್ವಾತಂತ್ರ್ಯ ಹೋರಾಟದ ಕರೆ ನೀಡಲು ಗಾಂಧೀಜಿ ಭೇಟಿ ನೀಡಿದ ಬಗ್ಗೆ ಸ್ಮರಿಸಿದರು.
ಈ ದಿನ ಮತ್ತೊಬ್ಬ ಮಹನೀಯ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಪ್ರತಿಯೊಬ್ಬರೂ ಸರಳ ಜೀವನ ನಡೆಸಬೇಕು. ಹಂಚಿ ಬಾಳಬೇಕೆಂಬ ತತ್ವದ ಆಧಾರದ ಮೇಲೆ ನಂಬಿಕೆ ಇಟ್ಟಿದ್ದ ಶಾಸ್ತ್ರೀಜಿ ಸಮಾಜ, ಪ್ರಜೆಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಗಾಂಧೀಜಿಯವರ ತತ್ವಾದರ್ಶಗಳ ಮೇಲೆ ನಂಬಿಕೆ ಇಟ್ಟಿದ್ದ ಅವರ ಸರಳ ಜೀವನ ದೇಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ ಗಾಂಧೀಜಿಯವರ ಜೀವನವು ತೆರೆದ ಪುಸ್ತಕವಾಗಿದ್ದು, ನಮ್ಮೆಲ್ಲರ ಬದುಕಿಗೆ ಸಂದೇಶವಾಗಿದೆ. ಗಾಂಧೀ ತತ್ವಗಳನ್ನು ನಾವೆಲ್ಲಾ ಅಳವಡಿಸಿಕೊಂಡಿದ್ದೇವೆಂದು ನಮಗೆ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳುವ ಸಮಯವಿದು. ಇಂದಿನ ಸಮಾಜದಲ್ಲಿ ಕೇವಲ ಮಾತುಗಳೇ ಸಾಧನೆಯಾಗಿದೆ. ಸಾಧನೆಗಳು ಮಾತಾದಾಗ ಮಾತ್ರ ಗಾಂಧೀ ಮಾರ್ಗವನ್ನು ತಲುಪಬಹುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ವಾರ್ತಾ ಇಲಾಖೆಯ ಆರ್. ರೂಪಕಲಾ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಸ್ವಾಗತಿಸಿದರು. ಮಧುಕುಮಾರ್ ನಿರೂಪಿಸಿದರು. ಡಾ ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ರಾಜಶೇಖರ್ ವಂದಿಸಿದರು.