8 ಗ್ರಾಪಂಗಳಿಗೆ ಗಾಂಧಿ ಗ್ರಾಮ ಪುರಸ್ಕಾರ

ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮ ಪಂಚಾಯಿತಿ
11
ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮ ಪಂಚಾಯಿತಿ
Published on


ಶಿಡ್ಲಟ್ಟದ ಆನೂರು ಗ್ರಾಪಂಗೆ ಹೆಚ್ಚು ಅಂಕ ನಾಳೆ ಪ್ರದಾನ


ಚಿಕ್ಕಬಳ್ಳಾಪುರ:
ಜಿಲ್ಲೆಯಲ್ಲಿನ 8 ಗ್ರಾಪಂಗಳು ಉತ್ತಮ ಕಾರ್ಯ ನಿರ್ವಹಣೆಯ ಆಧಾರದ ಮೇಲೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಅ.2ರಂದು ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವರು ಗ್ರಾ.ಪಂ.ಗಳಿಗೆ ಪುರಸ್ಕಾರ ನೀಡಲಿದ್ದಾರೆ. ಗ್ರಾ.ಪಂ.ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ 2013-14ನೇ ಸಾಲಿನಿಂದ ಪ್ರತಿ ತಾಲೂಕಿಗೊಂದರಂತೆ ಗಾಂಧಿ ಪುರಸ್ಕಾರ ನೀಡಲಾಗುತ್ತಿದೆ. ಅದರಂತೆ ಜಿಪಂ ಸಿಇಒ ಅಧ್ಯಕ್ಷತೆಯ ಆಯ್ಕೆ ಸಮಿತಿ ಮೂಲಕ ಶಿಾರಸ್ಸಾದ ಜಿಲ್ಲೆಯ 8 ಗ್ರಾಪಂಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಸ್ವಚ್ಛತೆ, ನೈರ್ಮಲ್ಯ, ತೆರಿಗೆ ವಸೂಲಿ, ಕುಡಿಯುವ ನೀರು ಪೂರೈಕೆ, ನಿವೇಶನ, ವಸತಿ, ಸ್ವಚ್ಛ ಭಾರತ ಯೋಜನೆ ಅನುಷ್ಠಾನ, ನ ತ್ಯಾಜ್ಯ ವಿಲೇವಾರಿ, ಗ್ರಾಮ ಸಭೆಗಳ ಆಯೋಜನೆ ಸೇರಿ ವಿವಿಧ ಚಟುವಟಿಕೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಪುರಸ್ಕಾರಕ್ಕೆ ಆಯ್ಕೆ ವಾಡಲಾಗಿದೆ.

ಅಭಿವೃದ್ಧಿಗೆ ಮಾದರಿ ಗೂಳೂರು ಗ್ರಾಪಂ
ಬಾಗೇಪಲ್ಲಿ: ತಾಲೂಕಿನ ಗೂಳೂರು ಗ್ರಾಮ ಪಂಚಾಯಿತಿಯು ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಪೈಕಿ ಜನರ ಜೀವನಮಟ್ಟ ಸುಧಾರಿಸಲು ಸರ್ಕಾರದ ಅನುದಾನದ ಸಮರ್ಪಕ ಬಳಕೆ, ಗ್ರಾಮ ಪಂಚಾಯಿತಿ ಕಟ್ಟಡ ದುರಸ್ತಿ, ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಡಿಜಿಟಲ್ ಗ್ರಂಥಾಲಯ, ಮಕ್ಕಳ ಗ್ರಾಮಸಭೆ, ಮಹಿಳಾ ಗ್ರಾಮಸಭೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯಮಟ್ಟ ಪ್ರಶಸ್ತಿ ಲಭಿಸಿದೆ. ಪಂಚಾಯಿತಿಯ ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆ, ನರೇಗಾ ಯೋಜನೆಯಡಿ ಪ್ರಗತಿ, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಗೃಹಗಳ ನಿರ್ಮಾಣ, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸೇರಿ ಹಲವು ಕಾರ್ಯ ಕೈಗೊಳ್ಳುವ ಮೂಲಕ ಬಾಗೇಪಲ್ಲಿ ತಾಲೂಕಿಗೆ ಮಾದರಿ ಗ್ರಾಮ ಪಂಚಾಯಿತಿ ಎನಿಸಿದೆ.

ಕಸವಿಲೇವಾರಿಯಲ್ಲಿ ತೊಂಡೇಬಾವಿ ಮೊದಲು
ಗೌರಿಬಿದನೂರು: ಪ್ರತಿವರ್ಷ ಮಹಾತ್ಮಗಾಂಧಿ ಜಯಂತಿ ಸಂದರ್ಭದಲ್ಲಿ ಪ್ರದಾನ ಮಾಡಲಾಗುವ ಗಾಂಧಿ ಗ್ರಾಮ ರಾಜ್ಯಮಟ್ಟದ ಪ್ರಶಸ್ತಿಗೆ ಈ ಬಾರಿ ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಪಂಚಾಯಿತಿ ಆಯ್ಕೆಯಾಗಿದೆ.
ಜಿಲ್ಲೆಯಿಂದ ಒಟ್ಟು 8 ಗ್ರಾಪಂಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಪೈಕಿ ತೊಂಡೇಬಾವಿ ಪಂಚಾಯಿತಿಯೂ ಒಂದು.
ಗ್ರಾಪಂ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ಪರಿಶ್ರಮ ಹಾಗೂ ನಾಗರಿಕರ ಸಹಕಾರಕ್ಕೆ ಪ್ರತಿಫಲ ಸಿಕ್ಕಾಂತಾಗಿದ್ದು, 150 ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಗ್ರಾಪಂ ತೋರಿದ ಪ್ರಗತಿ ಆಧರಿಸಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ 21 ಸದಸ್ಯರಿದ್ದು, 14 ಹಳ್ಳಿಗಳ ಪೈಕಿ 9,787 ಜನಸಂಖ್ಯೆ ಹೊಂದಿದೆ. ಸ್ವಚ್ಛ ಭಾರತ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಗ್ರಾಪಂ ಆದ್ಯತೆ ನೀಡಿದ್ದು, ಪ್ರತಿ ದಿನ ಮನೆಮನೆಗೆ ತೆರಳಿ ಕಸ ಸಂಗ್ರಹಣೆ ಮಾಡಿ ತ್ಯಾಜ್ಯ ಘಟಕಕ್ಕೆ ವಿಲೇವಾರಿ ಮಾಡಲಾಗುತ್ತದೆ. ತೊಂಡೇಬಾವಿ, ಕಲ್ಲಿನಾಯಕನಹಳ್ಳಿ, ಜಿ.ಬೊಮ್ಮಸಂದ್ರ, ಅಲಕಾಪುರ, ಬೇವನಹಳ್ಳಿ, ತುರಿದಾಳು ಸೇರಿ ಒಟ್ಟು 6 ಪಂಚಾಯಿತಿಗಳಿಗೆ ಸೇರಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದ್ದು, ಈ ಪೈಕಿ ಘಟಕವನ್ನು ಸಮರ್ಪಕವಾಗಿ ಬಳಸಿಕೊಂಡು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವಲ್ಲಿ ತೊಂಡೇಬಾವಿ ಗ್ರಾಪಂ ಮೇಲುಗೈ ಸಾಧಿಸಿದೆ.

ಅಭಿವೃದ್ಧಿಯಲ್ಲಿ ತಾಲೂಕಿಗೆ ಮಾದರಿ ಕಂದಾಯ ವಸೂಲಾತಿಯಲ್ಲಿ ತಾಲೂಕಿನಲ್ಲಿಯೇ ತೊಂಡೇಬಾವಿ ಪಂಚಾಯಿತಿ ಮೊದಲ ಸ್ಥಾನದ ಹೆಗ್ಗಳಿಕೆ ಸಂಪಾದಿಸಿದೆ. 15ನೇ ಹಣಕಾಸು ಯೋಜನೆ, ಪರಿಶಿಷ್ಟ ಜಾತಿ ಹಾಗೂ ಪಂಗಡ ಮತ್ತು ಶೇ.5ರ ಅಂಗವಿಕಲರ ಕಾರ್ಯಕ್ರಮಗಳ ಅನುಷ್ಠಾನ, ಸ್ವಚ್ಛತೆ, ಬೀದಿದೀಪಗಳ ನಿರ್ವಹಣೆ ಸೇರಿ ಎಲ್ಲ ಯೋಜನೆ, ಕಾರ್ಯಕ್ರಮಗಳಲ್ಲೂ ಮಾದರಿ ಹೆಜ್ಜೆಯಿರಿಸಿದೆ.

ಪುರಸ್ಕೃತ ಗ್ರಾಪಂಗಳಿಗೆ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುತ್ತದೆ. ಇದನ್ನು ಸ್ವಚ್ಛತೆ, ಘನ ತ್ಯಾಜ್ಯ ನಿರ್ವಹಣೆ, ಉಪಕರಣಗಳ ಪೂರೈಕೆ ಸೇರಿ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಅವಕಾಶವಿದೆ.

ಕೃಷ್ಣಮೂರ್ತಿ ಪಿಡಿಒ ಗೂಳೂರು ಗ್ರಾಪಂ
ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರಶಸ್ತಿ ಪ್ರೇರಣೆ ನೀಡಿದೆ.
ಅನುರಾಧಾ ರಮೇಶ್ ಬಾಬು ಅಧ್ಯಕ್ಷೆ, ಗೂಳೂರು ಗ್ರಾಪಂ

ಈ ಬಾರಿ ತೊಂಡೇಬಾವಿ ಪಂಚಾಯಿತಿ ಗಾಂಧಿ ಗ್ರಾಮ ಪ್ರಶಸ್ತಿಗೆ ಪಾತ್ರವಾಗಿರುವುದು ಇತರ ಪಂಚಾಯಿತಿಗಳಿಗೂ ಉತ್ತಮವಾಗಿ ಕೆಲಸ ಮಾಡಲು ಸ್ಫೂರ್ತಿಯಾಗಲಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗಿದಲ್ಲಿ ಗ್ರಾಮೀಣಾಭಿವೃದ್ಧಿ ಸಾಧ್ಯ ಎಂಬುದನ್ನು ಈ ಪ್ರಶಸ್ತಿ ಸಾರಿ ಹೇಳಿದೆ. -ಹೊನ್ನಯ್ಯ ತಾಪಂ ಇಒ

ಗ್ರಾಪಂ ಚುನಾಯಿತ ಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಕೆಲಸಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿದೆ. ಜನತೆಯ ಸಹಕಾರದಿಂದ ಮತ್ತಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಶ್ರಮಿಸಲಾಗುವುದು.
- ಬಸವರಾಜ್ ಬಳೂಟಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ

ನಮ್ಮ ಅವಧಿಯಲ್ಲಿ ತೊಂಡೇಬಾವಿ ಪಂಚಾಯಿತಿ ರಾಜ್ಯಮಟ್ಟದ ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆಯಾಗಿರುವುದು ಖುಷಿ ನೀಡಿದೆ. ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರೇರಣೆ ದೊರೆತಿದೆ.
- ಕಾಮಾಕ್ಷಿ ಗ್ರಾ.ಪಂ.ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net