

ಶಿರಸಿ: ತಾಲೂಕಿನ ಹುತ್ಗಾರ್ ಗ್ರಾಮ ಪಂಚಾಯಿತಿಯು 2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದೆ.
ತಾಲೂಕಿನ 32 ಗ್ರಾಮ ಪಂಚಾಯಿತಿಗಳ ಪೈಕಿ ಹುತ್ಗಾರ್ ಗ್ರಾಮ ಪಂಚಾಯಿತಿಗೆ ಉತ್ತಮ ಅಭಿವೃದ್ಧಿ ಕಾರ್ಯ ಹಾಗೂ ಸರ್ಕಾರದ ಯೋಜನೆಗಳಿಗೆ ನಿಗದಿತ ಸಮಯದಲ್ಲಿ ಯೋಜನೆ ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾಗಿದ್ದಕ್ಕೆ ಈ ಪ್ರಶಸ್ತಿ ಲಭಿಸಿದೆ.
ಅನ್ಯ ಇಲಾಖೆಗಳ ಜತೆಗೆ ಉತ್ತಮ ಕಾರ್ಯನಿರ್ವಹಣೆ, ಸಕಾಲದಲ್ಲಿ ಸೇವೆ ನೀಡುವಿಕೆ, ಪಂಚಾಯಿತಿಯ ಎಲ್ಲಾ ಸಭೆಗಳು ನಿಗದಿತ ಅವಧಿಯಲ್ಲಿ ನಡೆದಿರುವುದು. ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ, ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರ ಜನಪರ ಕಾಳಜಿ, ಸಮಸ್ಯೆಗಳಿದ್ದರೂ ಅದರ ನಡುವೆ ಉತ್ತಮ ಸೇವೆ ನೀಡುತ್ತಿರುವುದು ಈ ಗ್ರಾಮ ಪಂಚಾಯಿತಿಯ ಹೆಗ್ಗಳಿಕೆಯಾಗಿದೆ.
ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಸಾರ್ವಜನಿಕರಿಗೆ ಮತ್ತಷ್ಟು ಸೇವೆ ನೀಡಲು ನಾವು ಸಿದ್ಧರಿದ್ದೇವೆ. ರಾಜ್ಯದ ಗ್ರಾಪಂಗಳಿಗೆ ನಾವು ಮಾದರಿಯಾಗುತ್ತೇವೆ. | ಶಿವಕುಮಾರ ಎಂ.ಪಿ., ಹುತ್ಗಾರ್ ಗ್ರಾಪಂ ಪಿಡಿಒ