

ಬೆಂಗಳೂರು: ಬನಶಂಕರಿಯ 2ನೇ ಹಂತದ ಕಿಮ್ಸ್ ವೈದ್ಯಕಿಯ ಕಾಲೇಜು ಮುಂಭಾಗದ ಶ್ರೀಹರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿರುವ "ಗಾಂಧಿ ಬಂಕರ್' ಮೇಳಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
ಒಂದೇ ಸೂರಿನಡಿ 80 ಮಳಿಗೆಗಳನ್ನು ಪ್ರತಿಷ್ಠಾಪಿಸಿರುವ ಈಶಾನ್ಯ ರಾಜ್ಯಗಳ ಕರಕುಶಲ ಮತ್ತು ಕೈಮಗ್ಗಗಳು ನೋಡುಗರ ಗಮನ ಸೆಳೆಯುತ್ತಿವೆ. ನೇಕಾರರಿಂದ ತಯಾರಿಸಿರುವ ಉತ್ಪನ್ನಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಟಸ್ಸಾರ್, ಎರಿ ರೇಷ್ಮೆ ಸೀರೆ, ಕಾಟರ್ ಸೀರೆಗಳು, ಶಾಲುಗಳು ಸೇರಿ ಇತರೆ ಕರಕುಶಲ ವಸ್ತುಗಳ ಬಗ್ಗೆ ಗ್ರಾಹಕರು ಮಾಹಿತಿ ಪಡೆದರು. ಜಗತ್ತಿನಲ್ಲಿ ಅಸ್ಸಾಂನ ಗಮುಸಾ ಮತ್ತು ಶಾಲುಗಳು ಪ್ರಸಿದ್ಧಿ ಹೊಂದಿದ್ದು, ಅವುಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ. ಭಾಸ್ಕರ್ ಜ್ಯೋತಿ ದಾಸ್, ಡಾ.ಎಸ್.ಚಂದ್ರಶೇಖರ ಎಂಬುವರು ಗ್ರಾಹಕರಿಗೆ ಟಸ್ಸಾರ್ ಸೀರೆ ಕುರಿತು ಉಪಯುಕ್ತ ಮಾಹಿತಿ ಒದಗಿಸುತ್ತಿದ್ದಾರೆ. ನುರಿತ ನೇಕಾರರಿಂದ ಉತ್ಪನ್ನಗಳನ್ನು ನೇಯ್ಗೆ ಮಾಡಲಾಗಿದೆ. ಅಲ್ಲದೆ, ಈಶಾನ್ಯ ರಾಜ್ಯಗಳ ಸಂಸತಿಯ ಸೊಬಗನ್ನು ಮೇಳದಲ್ಲಿ ಕಾಣಬಹುದು.
ಜ.16ರವರೆಗೆ ಮೇಳ ನಡೆಯಲಿದೆ.ಪ್ರತಿನಿತ್ಯ ಬೆಳಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ತೆರೆದಿದ್ದು, ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶವಿದೆ.