

ಮಧೂರು: ಪ್ರಾಚೀನ ಕಾವ್ಯಗಳ ವಾಚನ- ವ್ಯಾಖ್ಯಾನಗಳೆಂದರೆ ನಿಜವಾದ ಸರಸ್ವತಿಯ ಆರಾಧನೆ. ಗಮಕ ಕಲೆಯೆಂದರೂ ಇದುವೇ ಆಗಿದೆ. ಇದರಲ್ಲಿ ಸಾಹಿತ್ಯದ ರಸಪಾಕವೇ ಅಡಗಿದೆ ಎಂದು ಸಾಹಿತಿ ವಿ.ಬಿ.ಕುಳಮರ್ವ ಹೇಳಿದರು.
ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ವೇದಿಕೆಯಲ್ಲಿ ಗಮಕ ಕಲಾ ಪರಿಷತ್ ಮತ್ತು ಸಿರಿಗನ್ನಡ ವೇದಿಕೆಗಳ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಗಮಕ ಶ್ರಾವಣದ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಅಧ್ಯಕ್ಷ ರಾಮಕೃಷ್ಣ ಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಗಮಕ ಕಲೆಯ ಮಹತ್ವ ವಿವರಿಸಿದರು. ತೆಕ್ಕೇಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕುಳಮರ್ವ ಶಂಕರ ಶರ್ಮಾ ವಿರಚಿತ ಉತ್ತರಕಾಂಡ ಕಾವ್ಯಧಾರಾ ಎಂಬ ಮಹಾಕಾವ್ಯದಿಂದ ಆಯ್ದ ಭಾಗವನ್ನು ಗಾಯಕಿ ಯಶೋದಾ ಭಟ್ ಉಪ್ಪಂಗಳ ವಾಚಿಸಿದರು. ಕುಳಮರ್ವ ಶಂಕರ ಶರ್ಮ ಅವರನ್ನು ಗೌರವಿಸಲಾಯಿತು. ಗಮಕಿ ಗುರುಮೂರ್ತಿ ನಾಯ್ಕಪು ವ್ಯಾಖ್ಯಾನಗೈದರು. ಜಗದೀಶ ಕೂಡ್ಳು ಸ್ವಾಗತಿಸಿದರು. ಜಯಲಕ್ಷ್ಮೀ ಹೊಳ್ಳ ವಂದಿಸಿದರು.