ಡಾ.ಹೆಗ್ಗಡೆಗೆ ಬೆಂಬಲ ಜೈನ ಸಮಾಜದ ಕರ್ತವ್ಯ : ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಮತ

06
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳ ಚರ್ತುವಿಧ ದಾನ ಪರಂಪರೆಯೊಂದಿಗೆ ಇಂದು ವಿಶ್ವವಿಖ್ಯಾತವಾಗಿದೆ. ಕ್ಷುಲ್ಲಕ ಕಾರಣದಿಂದ, ಮಾಧ್ಯಮಗಳಲ್ಲಿ ಅಪಪ್ರಚಾರದಿಂದ ಎಲ್ಲರಿಗೂ ತೀವ್ರ ದುಃಖವಾಗಿದೆ. ಧರ್ಮಸ್ಥಳದ ಭವ್ಯ ಪರಂಪರೆ ಹಾಗೂ ಡಾ.ಹೆಗ್ಗಡೆ ಬಹುಮುಖಿ ಸಮಾಜಸೇವಾ ಕಾರ್ಯಗಳನ್ನು ಬೆಂಬಲಿಸಿ ಸಕ್ರಿಯ ಸಹಕಾರ ನೀಡುವುದು ಸಮಗ್ರ ಜೈನ ಸಮಾಜದ ಕರ್ತವ್ಯ ಎಂದು ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಕಾರ್ಕಳ ಸೀಮೆಯ ಜೈನ ಬಾಂಧವರೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಗೌರವಿಸಿ ಮಾತನಾಡಿದರು.

ಕಾರ್ಕಳದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಸತ್ಯಕ್ಕೆ ಸದಾ ಜಯವಿದೆ. ಮಾತುಬಿಡ ಮಂಜುನಾಥ ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಸತ್ಯ ಪ್ರಕಟವಾಗುವುದರೊಂದಿಗೆ ಆರೋಪಿಗಳಿಗೆ ಶಿಕ್ಷೆಯಾಗಲಿ. ಡಾ.ಹೆಗ್ಗಡೆ ಜತೆಗೆ ನಾವೆಲ್ಲ ಸದಾ ಪೂರ್ಣ ಬೆಂಬಲ ನೀಡಲು ಸಿದ್ಧರು, ಬದ್ಧರು ಎಂದರು.

ಕಾರ್ಕಳ ಸೀಮೆಯ ಎಲ್ಲ ಬಸದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪುರೋಹಿತರು ತಂದ ಪ್ರಸಾದವನ್ನು ಹೆಗ್ಗಡೆ ಅವರಿಗೆ ಅರ್ಪಿಸಿದರು. ಕಾರ್ಕಳ ಮಠದ ಬಸದಿಯ ವಿಶೇಷ ಪ್ರಸಾದವನ್ನು ಸ್ವಾಮೀಜಿ ಡಾ.ಹೆಗ್ಗಡೆ ಅವರಿಗೆ ನೀಡಿ ಶುಭಹಾರೈಸಿದರು.

ಹೇಮಾವತಿ ವಿ.ಹೆಗ್ಗಡೆ, ಡಿ.ಹಷೇರ್ಂದ್ರ ಕುಮಾರ್, ಸುಪ್ರಿಯಾ ಹಷೇರ್ಂದ್ರ ಕುಮಾರ್, ಶಿರ್ತಾಡಿಯ ಎಸ್.ಡಿ.ಸಂಪತ್ ಸಾವ್ರಾಜ್ಯ, ಸುದರ್ಶನ ಜೈನ್ ಬಂಟ್ವಾಳ, ಪುಷ್ಪರಾಜ ಜೈನ್ ಮಂಗಳೂರು, ಕುಲದೀಪ್, ಚೌಟರ ಅರಮನೆ, ಮೂಡುಬಿದಿರೆ, ಅಂಡಾರು ಮಹಾವೀರ ಹೆಗ್ಡೆ, ಅನಂತ್ರಾಜ ಪೂವಣಿ, ಶಿಶುಪಾಲ ಜೈನ್, ಮೋಹನ ಪಡಿವಾಳ್, ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ಗುಣವರ್ಮ ಜೈನ್ ಕಾರ್ಕಳ, ನೇಮಿರಾಜ ಆರಿಗಾ ಮೊದಲಾದವರಿದ್ದರು. ಕಾರ್ಕಳ ಸೀಮೆಯಿಂದ ಸುಮಾರು ಮುನ್ನೂರು ಮಂದಿ ಶ್ರಾವಕರು, ಶ್ರಾವಕಿಯರು ಆಗಮಿಸಿದರು.

ಕೆಸರಾದ ನೀರನ್ನು ಮತ್ತೆ ತಿಳಿಯಾಗಿ ಪರಿಶುದ್ಧಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅಪಪ್ರಚಾರ, ಆರೋಪಗಳೆಲ್ಲ ದೂರವಾಗಲಿ. ಡಾ.ಹೆಗ್ಗಡೆ ಅವರಿಗೆ ಎಲ್ಲಾ ದೈವ, ದೇವರು ದೀರ್ಘಾಯುರಾರೋಗ್ಯವನ್ನಿತ್ತು ಇನ್ನಷ್ಟು ಲೋಕಕಲ್ಯಾಣ ಕಾರ್ಯಗಳನ್ನು ಮಾಡುವಂತೆ ಹರಸಲಿ.

ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಕಳ ಜೈನಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net