

ಶಿರಸಿ: ಮಾರಿಕಾಂಬಾ ಜಾತ್ರೆ ವಿಧಿ ವಿಧಾನದಂತೆ ಗಡಿ ಮಾರಿಯನ್ನು ಗಡಿ ದಾಟಿಸುವ ಕಾರ್ಯಕ್ರಮ ಮಂಗಳವಾರ ನಡೆಯಿತು.
ಜಾತ್ರೆ ನಡೆಯುವ ವರ್ಷದಂದು ಬನವಾಸಿ ರಸ್ತೆ ಗಡಿ ಗ್ರಾಮಗಳಿಂದ ಗಡಿ ಮಾರಿ ಹೊರಡಿಸಲಾಗುತ್ತದೆ. ಆ ಗ್ರಾಮಗಳ ಜನತೆ ಗಡಿ ಮಾರಿಯನ್ನು ನಗರದ ಹೊರ ವರ್ತಲದವರೆಗೂ ತಂದು ಇಟ್ಟು ಹೋಗುತ್ತಾರೆ. ಮಾರಿಕಾಂಬಾ ದೇವಾಲಯದ ಸಂಪ್ರದಾಯದಂತೆ ಬಾಬುದಾರರು, ಭಕ್ತರು ಪೂಜೆ ಸಲ್ಲಿಸಿ ಬಳಿಕ ನಗರದ ನೀಲೇಕಣಿಯವರೆಗೂ ಒಯ್ದು ಬಿಡುತ್ತಾರೆ. ಊರಿನ ಒಳಿತು ಮತ್ತು ಆರೋಗ್ಯ ಸಮಸ್ಯೆಗೆ ಪರಿಹಾರ ಹಾಗೂ ಇಷ್ಟಾರ್ಥಗಳನ್ನು ಗಡಿ ಮಾರಿ ನೀಡುತ್ತಾಳೆ ಎಂಬ ನಂಬಿಕೆ ಇದೆ. ಗಡಿ ಮಾರಿಯನ್ನು ದಾಟಿಸುವ ವೇಳೆ ಭಕ್ತರು ತಮ್ಮ ಮನೆಗಳಲ್ಲಿರುವ ಹಳೆಯ ವಸ್ತ್ರಗಳನ್ನೂ ಅಲ್ಲಿಯೇ ಇಟ್ಟುಬರುತ್ತಾರೆ. ಈ ರೀತಿ ಮಾಡುವುದರಿಂದ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ ಎಂಬ ನಂಬಿಕೆ ಇದೆ.
ಮುಂದಿನ ಕೆಲ ದಿನಗಳ ಕಾಲ ಗಡಿ ಮಾರಿಯ ಸಂಚಾರ ಕುಮಟಾ ರಸ್ತೆಯಲ್ಲಿ ನಡೆಯಲಿದೆ. ಗಡಿ ಮಾರಿ ಬಂದಂತೆಯೇ ಆಯಾ ಗ್ರಾಮದ ಜನತೆ ಒಟ್ಟಾಗಿ ಕುಮಟಾ ರಸ್ತೆಗುಂಟ ಮುಂದಿನ ಊರಿಗೆ ಸಾಗಿಸಲಾಗುತ್ತದೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ಈ ಪ್ರಯಾಣ ಅಂತ್ಯಗೊಳ್ಳುತ್ತದೆ. ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾರಿಕಾಂಬಾ ದೇವಾಲಯದ ಅಧ್ಯಕ್ಷ ರವಿ ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ್, ಬಾಬುದಾರ ಮುಖ್ಯಸ್ಥ ಜಗದೀಶ ಗೌಡ ಇತರರಿದ್ದರು.