ಗಡಿಗವಾರಹಳ್ಳಿ ಮುರಾರ್ಜಿ ವಸತಿ ಶಾಲೆ ಪ್ರಾಂಶುಪಾಲೆ ಅಮಾನತು

2
ಅಮಾನತಾದ ಪ್ರಾಂಶುಪಾಲೆ ಎ.ಆರ್. ಖುಬ್ರಾ ಮುಬೀನ್
Published on

ನಿಲಯಪಾಲಕರ ಸಹಿ ಮಾಡಿ ಹಣ ಪಡೆದ ಆರೋಪ

ಚಿಂತಾಮಣಿ: ಅವ್ಯವಹಾರದ ಆರೋಪದ ಮೇರೆಗೆ ತಾಲೂಕಿನ ಗಡಿಗವಾರಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ

ಪ್ರಾಂಶುಪಾಲೆ ಎ.ಆರ್. ಖುಬ್ರಾ ಮುಬೀನ್ ಅವರನ್ನುರಾಜ್ಯ ಸರ್ಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್.ಕಾಂತರಾಜು ಅಮಾನತು ಮಾಡಿ ಆದೇಶಿಸಿದ್ದಾರೆ.

ಪ್ರಸ್ತುತ ನಿಯೋಜನೆ ಮೇರೆಗೆ ಶಿಡ್ಲಘಟ್ಟ ತಾಲೂಕಿನ ಗೊರ್ಲಗುಮ್ಮನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಖುಬ್ರಾ ಮುಬೀನ್, ಈ ಹಿಂದೆ ತಾಲೂಕಿನ ಗಡಿಗವಾರಹಳ್ಳಿ ಮುರಾರ್ಜಿ ವಸತಿ ಶಾಲೆ ಮತ್ತು ಚಿಂತಾಮಣಿ ತಾಲೂಕಿನ ಕೆ.ರಾಗುಟ್ಟಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದರು. ಆಗ ಇವರ ಮೇಲೆ ಅಕ್ರಮದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ವಸತಿ ಶಾಲೆ ದಾಖಲೆಗಳನ್ನು ಹಸ್ತಾಂತರಿಸದೇ ಶಾಲೆ ಆಡಳಿತಕ್ಕೆ ತೊಂದರೆ ಉಂಟು ಮಾಡಿದ್ದಾರೆ ಎಂದು ಅಮಾನತು ಮಾಡಲಾಗಿದೆ.

ಹಣ ದುರುಪಯೋಗ ಆರೋಪ

ಎ.ಆರ್.ಖುಬ್ರಾಮಬೀನ್ ಅವರು ವಸತಿ ಶಾಲೆಯಿಂದ ಮತ್ತೊಂದು ವಸತಿ ಶಾಲೆಗೆ ವರ್ಗಾವಣೆಗೊಂಡ 20 ದಿನಗಳ ನಂತರ ತಾಲೂಕಿನ ಗಡಿಗವಾರಹಳ್ಳಿ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ನಿಲಯಪಾಲಕರ ಜಂಟಿ ಖಾತೆಯಲ್ಲಿದ್ದ 1.56 ಲಕ್ಷ ರೂ.ಗಳನ್ನು ನಿಲಯಪಾಲಕರ ಸಹಿ ಮಾಡಿ ಚೆಕ್‌ಮೂಲಕ ಅಕ್ರಮವಾಗಿ ಪಡೆದಿರುವುದು ತನಿಖೆ ವೇಳೆ ಗೊತ್ತಾಗಿದೆ. ಶಿಡ್ಲಘಟ್ಟ ತಾಲೂಕಿನ ಗೊರ್ಲಗುಮ್ಮನಹಳ್ಳಿ ಮುರಾರ್ಜಿ ವಸತಿ ಶಾಲೆಗೆ ವರ್ಗಾವಣೆಗೊಂಡ ನಂತರ ಹಿಂದೆ ಇದ್ದ ವಸತಿ ಶಾಲೆಯ ದಾಖಲೆಗಳನ್ನು ಸಂಬಂಧಿಸಿದ ಪ್ರಾಂಶುಪಾಲರಿಗೆ ಹಸ್ತಾಂತರಿಸದೇ ಇರುವುದು ಹಾಗೂ ನಿಲಯಪಾಲಕರ ಸಹಿಯನ್ನು ಮಾಡಿ ಅಕ್ರಮವಾಗಿ ಹಣ ಕಬಳಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net