ಲೋಕಾ ಬಲೆಗೆ ಹೆಸ್ಕಾಂ ನೌಕರ

ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ
Published on: 

ರೋಣ: ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಲ್ಲಿಯ ಹೆಸ್ಕಾಂ ಉಪವಿಭಾಗದ ಸೆಕ್ಷನ್ ಆಫಿಸರ್ ಮಾಬುಸಾಬ್ ಮಕ್ತುಂಸಾಬ್ ಆಡಿನ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ತಾಲೂಕಿನ ಕೊತಬಾಳ ಗ್ರಾಮದ ಮೇಘಯ್ಯ ಶೇಖರಯ್ಯ ಹಿರೇಮಠ ಎಂಬುವವರು ಜಮೀನಿನಲ್ಲಿ ಪಶು ಸಾಕಣೆಗಾಗಿ ಶೆಡ್ ನಿರ್ಮಿಸಿಕೊಂಡಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ಹೆಸ್ಕಾಂಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಶೆಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ವಿದ್ಯುತ್ ಗುತ್ತಿಗೆದಾರ ಮಹಾದೇವ ಸಜ್ಜನವರ ಎಂಬುವರ ಮೂಲಕ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 15 ಸಾವಿರಕ್ಕೆ ಒಪ್ಪಿ 5000 ರೂ. ಫೋನ್‌ಪೇ ಮಾಡಿಸಿಕೊಂಡು ಉಳಿದ 10 ಸಾವಿರ ರೂ. ನೀಡುವಂತೆ ಮೇಲಿಂದ ಮೇಲೆ ಒತ್ತಾಯ ಮಾಡಿದ್ದರು. ಇದರಿಂದ ನೊಂದ ಅರ್ಜಿದಾರ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ಅದರಂತೆ ಬುಧವಾರ ಹೆಸ್ಕಾಂ ಕಚೇರಿ ಮೇಲೆ ದಾಳಿ ಮಾಡಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಮಾಬುಸಾಬ ಆಡಿನ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಧಾರವಾಡ ಲೋಕಾಯುಕ್ತ ಎಸ್‌ಪಿ ಡಾ. ಸಿದ್ದಲಿಂಗಪ್ಪ ನೇತೃತ್ವದಲ್ಲಿ, ಗದಗ ಡಿಎಸ್‌ಪಿ ಲೋಕೇಶ, ಇನ್‌ಸ್ಪೆಕ್ಟರ್ ಎಸ್.ಎಸ್. ತೇಲಿ ಹಾಗೂ ಲೋಕಾಯುಕ್ತ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net