

ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ಮಳೆ ಕೈಕೊಟ್ಟ ಪರಿಣಾಮ ಭೂಮಿ ಬಿರುಕು ಬಿಟ್ಟಿದೆ. ಕೆಂಡದಂತೆ ಸುಡುವ ಬಿಸಿಲಿಗೆ ಹತ್ತಿ ಗಿಡಗಳು ಒಣಗಿ ಕಟ್ಟಿದ ಹೂವು, ಕಾಯಿ ಎಲೆಯೂ ಉದುರಿವೆ. ಮಾಗಬೇಕಿದ್ದ ಕಾಯಿಗಳು ಅವಧಿಗೂ ಮುನ್ನವೇ ಬಾಯ್ದೆರೆದು ಹತ್ತಿ ಹೊರಚಾಚಿವೆ. ಪರಿಣಾಮ ಹತ್ತಿ ನಂಬಿದ ರೈತರ ಚಿತ್ತ ಕದಡಿದೆ.
ಎಕರೆಗೆ 10 ಕ್ವಿಂಟಾಲ್‌ವರೆಗೆ ಹತ್ತಿ ಬೆಳೆಯುತ್ತಿದ್ದ ರೈತರು ಈ ವರ್ಷ ಕೇವಲ ಒಂದು ಕ್ವಿಂಟಾಲ್ ಹತ್ತಿಗೆ ಪರದಾಡಬೇಕಾಗಿದೆ. ರೈತರ ಪ್ರಮುಖ ವಾಣಿಜ್ಯ ಬೆಳೆ(ಬಳಿ ಬಂಗಾರ) ಹತ್ತಿಗೆ ಪ್ರಸಕ್ತ ವರ್ಷ ದಾಖಲೆ ಬೆಲೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 9,000-9,500 ರೂ.ಬೆಲೆ ಇದ್ದರೂ ಬೆಳೆಯೇ ಇಲ್ಲದ್ದರಿಂದ ರೈತರು ಮರುಗುತ್ತಿದ್ದಾರೆ. ಮಳೆ ಕೊರತೆಯ ಪರಿಣಾಮ ಹೆಸರು, ಶೇಂಗಾ, ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ ಬೆಳೆಗಳ ಜತೆಗೆ ಹತ್ತಿಗೂ ಕುತ್ತು ಬಂದಿದೆ.
ಜಿನ್ನಿಂಗ್ ಮಿಲ್ ಬಂದ್: ಹತ್ತಿ ಬೆಳೆಗೆ ಹತ್ತು ಕುತ್ತು ಎನ್ನುವುದರಿಂದ ಅತ್ಯಂತ ಕಾಳಜಿಯಿಂದ ಹೆಚ್ಚಿನ ಕ್ಷೇತ್ರದಲ್ಲಿ ಬಿಟಿಹತ್ತಿ ಬೆಳೆಯುತ್ತಿದ್ದಾರೆ. ಕಾರಣ ಖರ್ಚು ವೆಚ್ಚ ಕಡಿಮೆ, ಉತ್ತಮ ಇಳುವರಿ, ಬೆಂಬಲ ಬೆಲೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿಯೂ ಹೆಚ್ಚಿನ ಬೆಲೆ ಸಿಗುವ ಮೂಲಕ ರೈತರ ಭರವಸೆಯ ಬೆಳೆಯಾಗಿತ್ತು. ಹತ್ತಿ ಮಾರಾಟಕ್ಕೆ ಲಕ್ಷ್ಮೇಶ್ವರ ಮಾರುಕಟ್ಟೆ ಹೆಸರಾಗಿದ್ದು ಸದ್ಯ 9 ಸಾವಿರದಿಂದ 9600 ರೂ. ವರೆಗೂ ಬೆಲೆ ಇದ್ದು, ಗುಣಮಟ್ಟದ ಕೊರತೆಯಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ 1000 ಎಕರೆ ಜಮೀನಿನಲ್ಲಿ ಹತ್ತಿ ಬೆಳೆಯಲಾಗಿದ್ದು ನೆರೆಯ ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ಹತ್ತಿ ಬೆಳೆಯುವ ರೈತರಿಗೆ ಲಕ್ಷ್ಮೇಶ್ವರವೇ ಮುಖ್ಯ ಮಾರುಕಟ್ಟೆಯಾಗಿದೆ. ಆದಾಗ್ಯೂ ಹತ್ತಿ ಬೆಳೆ ಇಳುವರಿ ಸಂಪೂರ್ಣ ಕುಸಿದದ್ದರಿಂದ ಇಲ್ಲಿರುವ 20ಕ್ಕೂ ಹೆಚ್ಚು ಜಿನ್ನಿಂಗ್ ಮಿಲ್‌ಗಳು ಬಂದ್ ಆಗಿವೆ.
ದೀಪಾವಳಿಯಿಂದ ಪ್ರಾರಂಭವಾಗುವ ಹತ್ತಿ ಬಿಡಿಸುವ ಕಾರ್ಯ ನಾಲ್ಕೈದು ಬೀಡು ಬರುತ್ತಿತ್ತು. ಈಗ ಒಂದೇ ಬೀಡಿಗೆ ಹೊಲ ಖಾಲಿಯಾಗುತ್ತಿದೆ. ತೇವಾಂಶ ಕೊರತೆಯಿಂದ ಬೆಳೆಗಳು ಅವಧಿಗೂ ಮುನ್ನವೇ ಮಾಗಿ, ಫಸಲು ಕುಂಠಿತಗೊಂಡಿದೆ. ಇದರಿಂದ ಹತ್ತಿಯ ಗುಣಮಟ್ಟಕ್ಕೂ ಧಕ್ಕೆಯಾಗಿದೆ. ಇಳುವರಿಯೂ ಗಣನೀಯವಾಗಿ ಕುಸಿದಿದೆ. ಉತ್ತಮ ಬೆಲೆ ಇದ್ದರೂ ಮಾರಾಟಕ್ಕೆ ಬೇಕಾದಷ್ಟು ಉತ್ಪನ್ನವಿಲ್ಲದಿರುವುದು ಬೆಳೆಗಾರರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
20 ಸಾವಿರ ಖರ್ಚು: ಒಂದು ಎಕರೆ ಹತ್ತಿ ಬೆಳೆಯಲು ಬೀಜ, ಗೊಬ್ಬರ, ಕ್ರಿಮಿನಾಶಕ, ಎಡೆಕುಂಟೆ, ಕಳೆ ತೆಗೆಯುವುದು ಹಾಗೂ ಹತ್ತಿ ಬಿಡಿಸುವುದು ಸೇರಿದಂತೆ ಕನಿಷ್ಠ 20 ಸಾವಿರ ರೂ. ಖರ್ಚಾಗುತ್ತದೆ. ಆದರೆ, ಈ ಬಾರಿ ಎಕರೆಗೆ ಕೇವಲ ಒಂದು ಕ್ವಿಂಟಾಲ್ ಹತ್ತಿ ಬಂದಿದೆ. ಖರ್ಚು ಮಾಡಿದ ಅರ್ಧದಷ್ಟೂ ಹಣ ಸಿಗದಂತಾಗಿದೆ ಎಂದು ರೈತರಾದ ಸೋಮಪ್ಪ ಹೊಟ್ಟಿ, ಚನ್ನಪ್ಪ ಷಣ್ಮುಕಿ ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಕೂಡಲೇ ಹತ್ತಿ ಬೆಳೆಗಾರರ ನೆರವಿಗೆ ದಾವಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾಡಿದ ಖರ್ಚು ಬಾರದ ಸ್ಥಿತಿ: ಹತ್ತಿ ಬಿಡಿಸಲು ದಿನಕ್ಕೆ ಸುಮಾರು 300 ರೂ. ಕೂಲಿ ನೀಡಬೇಕಿದೆ. ಇಡೀ ದಿನ ಬಿಸಿಲಿನಲ್ಲಿ ದುಡಿದರೂ ಕೆಲ ಹೊಲಗಳಲ್ಲಿ 10-15 ಕೆ.ಜಿ. ಹತ್ತಿಯೂ ಸಿಗದ ಸ್ಥಿತಿ ಇದೆ. ಹೀಗಾಗಿ ಕಟಾವು ವೆಚ್ಚವೂ ರೈತನಿಗೆ ಹೊರೆಯಾಗಿದೆ. ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಬೆಳೆ ಬೆಳೆಯಲು ಮಾಡಿದ ಖರ್ಚಿನ ಜತೆಗೆ ಕಟಾವು ವೆಚ್ಚವೂ ಸೇರಿದ್ದು, ಕಡಿಮೆ ಇಳುವರಿಯಿಂದ ಒಟ್ಟಾರೆ ಆದಾಯ ಕುಸಿದಿದೆ.