

ದೇವದುರ್ಗ: ತಾಲೂಕಿನ ಆರಾಧ್ಯದೈವ ಗಬ್ಬೂರು ಶ್ರೀಬೂದಿಬಸವೇಶ್ವರ ಜಾತ್ರೆ ಬುಧವಾರ ಅದ್ದೂರಿಯಾಗಿ ಜರುಗಿತು.
ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ಶ್ರೀಬೂದಿಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಸಾಲಿ ಬೂದಯ್ಯಸ್ವಾಮಿ, ಸಾಲಿ ದೊಡ್ಡಬಸಯ್ಯಸ್ವಾಮಿ, ಸಾಲಿ ಶರಣಯ್ಯಸ್ವಾಮಿ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಶ್ರೀ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು.
ಸಂಜೆ ಲಕ್ಷಾಂತರ ಭಕ್ತರ ಮಧ್ಯೆ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು. ಭಕ್ತರು ಹೂವು, ಹಣ್ಣು, ಉತ್ತುತ್ತಿ, ಮಂಡಾಳು ಅರ್ಪಿಸಿ ಪುನಿತರಾದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳ ಶ್ರೀಮಠಕ್ಕೆ ಭೇಟಿನೀಡಿ ಶ್ರೀಗಳ ಆಶೀರ್ವಾದ ಪಡೆದರು. ಸುತ್ತಲಿನ ತಾಲೂಕು, ಜಿಲ್ಲೆಯ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಪುನೀತರಾದರು.
ಪೀಠಾಧಿಪತಿ ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಸುಲ್ತಾನಪುರದ ಶ್ರೀಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಎಚ್.ಎಸ್.ರೇಣುಕಪ್ರಸನ್ನ, ಕರ್ನಾಟಕ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ ಬಣಕಾರ, ಜಾತ್ರಾ ಸಮಿತಿ ಅಧ್ಯಕ್ಷ ಸದಾಶಿವಯ್ಯ ತಾತ, ಗುರುವಿನ ಸಿದ್ದಯ್ಯತಾತ, ಆಡಳಿತಾಧಿಕಾರಿ ಚನ್ನಬಸವ ಇತರರಿದ್ದರು.