

ತುಮಕೂರು: ನನಗೆ ಮುಖ್ಯಮಂತ್ರಿ ಮಾಡುತ್ತೇನೆ ಎಂದರೆ ನಾನು ಬೇಡ ಎಂದು ಹೇಳುತ್ತೇನಾ? ಹೀಗೆಂದು ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಪತ್ರಕರ್ತರ ಪ್ರಶ್ನೆಗೆ ನೀಡಿದ ತೀಕ್ಷ್ಣ ಪ್ರತಿಕ್ರಿಯೆ ಇದು.
ಕಾಂಗ್ರೆಸ್ ಶಾಸಕಾಂಗ ಸಭೆಯ ಅಭಿಪ್ರಾಯ ಪಡೆದು ಕಾಂಗ್ರೆಸ್ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ನಾನು ಮುಖ್ಯಮಂತ್ರಿ ಆಗಬೇಕೆಂಬುದು ನಮ್ಮ ಜಿಲ್ಲೆಯ ಅಭಿಮಾನಿಗಳ ಅಪೇಕ್ಷೆ. ಹಾಗೆಂದ ತಕ್ಷಣ ಅದು ಸಾಧ್ಯವಾಗುವುದಿಲ್ಲ. ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ 7 ಸ್ಥಾನ ಗೆಲ್ಲುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೋತ್ತರ ಸಮೀಕ್ಷೆಗಳು ನಿಖರವಲ್ಲದಿದ್ದರೂ ತಳ್ಳಿ ಹಾಕಲು ಸಾಧ್ಯವಿಲ್ಲ, ಬಹುತೇಕ ಎಲ್ಲಾ ಸಂಸ್ಥೆಗಳು ಒಂದೇ ಮಾದರಿಯ ವರದಿ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುವ ಬಗ್ಗೆ ನಮಗೂ ವಿಶ್ವಾಸವಿದೆ ಎಂದರು.