

ಕೆ.ಎಂ.ದೊಡ್ಡಿ: ಕಾಯಕವೇ ಕೈಲಾಸ ಎಂದು ತಿಳಿದು, ನಾನು, ನನ್ನದು ಎಂಬುದನ್ನು ಬಿಟ್ಟು ಆದರ್ಶನ ಜೀವನ ನಡೆಬೇಕು ಎಂದು ಚಿತ್ರನಟ ದೊಡ್ಡಣ್ಣ ತಿಳಿಸಿದರು.
ಭಾರತೀ ಎಜುಕೇಷನ್ ಟ್ರಸ್ಟ್ ವತಿಯಿಂದ ಗುರುವಾರ ಭಾರತೀ ಕ್ರೀಡಾಗಂಣದಲ್ಲಿ ಆಯೋಜಿಸಿದ್ದ ಭಾರತೀ ಉತ್ಸವ-2023 ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಸೆಯ ದಾಸರಾಗದೆ ಆಸೆಯನ್ನೇ ದಾಸನನ್ನಾಗಿ ಮಾಡಿಕೊಳ್ಳುವ ಮೂಲಕ ಪ್ರಬುದ್ಧತೆಯ ಬದುಕು ಕಟ್ಟಿಕೊಳ್ಳಿ. ಬದುಕಿನಲ್ಲಿ ಏಕಾಗ್ರತೆ ಇರಬೇಕು. ನಾವು ಮಾಡುವ ಸಾಧನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಹಿಂದೆ ಗುರು ಇದ್ದರೆ ಮುಂದೆ ಗುರಿ ಇರಬೇಕು. ನಾವು ಮಾಡುವ ಕೆಸದಲ್ಲಿ ಶ್ರದ್ಧೆ ಇದ್ದರೆ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಮಾಜಿ ಜಿ.ಮಾದೇಗೌಡ ಅವರು ಹಳ್ಳಿಗಾಡಿನ ಮಕ್ಕಳ ಭವಿಷ್ಯ ರೂಪಿಸಲು ಗ್ರಾಮೀಣ ಪ್ರದೇಶದಲ್ಲಿ ಸಂಸ್ಥೆ ಕಟ್ಟಿ ಸತ್ಕಾರ್ಯಗಳನ್ನು ಮಾಡುತ್ತಾ ಸಮಾಜಕ್ಕೆ ನಿದರ್ಶನವಾಗಿದ್ದಾರೆ. ಇಂತವರ ಆದರ್ಶಗಳನ್ನು ಇಂದಿನ ಯುವಪೀಳಿಗೆ ಮೈಗೂಡಿಸಿಕೊಳ್ಳಬೇಕು. ಕೆ.ಎಂ.ದೊಡ್ಡಿಯನ್ನು ಶಿಕ್ಷಣ ಕಾಶಿ ಮಾಡಿದ ಕೀರ್ತಿ ಜಿ.ಮಾದೇಗೌಡರದ್ದು ಎಂದರು.
ಮಾದೇಗೌಡರ ಬದುಕಿನ ಹೋರಾಟಗಳನ್ನು ಮರೆಯುವಂತಿಲ್ಲ. ಕಾವೇರಿ ವಿಚಾರ ಬಂದಾಗ ಇಂದು ಧ್ವನಿ ಎತ್ತುವವರು ಇಲ್ಲವಾಗಿದೆ. ಮಾದೇಗೌಡರು ಕಾವೇರಿ ಹೋರಾಟಕ್ಕೆ ಇಳಿಯುತ್ತಾರೆ ಎಂದರೆ ಸರ್ಕಾರಗಳು ನಡುಗುತ್ತಿದ್ದವು. ಅಂತಹ ಗಟ್ಟಿ ಧ್ವನಿಯ ವ್ಯಕ್ತಿತ್ವ ಮಾದೇಗೌಡರದ್ದು ಎಂದು ಸ್ಮರಿಸಿದರು.
ಮಾಜಿ ಸಂಸದ ದಿ.ಅಂಬರೀಷ್ ನನ್ನ ಪ್ರಾಣ ಸ್ನೇಹಿತ. ಆತ ನನಗಿಂತ ಚಿಕ್ಕವನಾಗಿದ್ದರೂ ಆತನಿಂದ ನಾನು ಸಾಕಷ್ಟು ಕಲಿತಿದ್ದೇನೆ. ಆತನ ಗುಣ ಅಪರಂಜಿ. ಅದರಂತೆ ಡಾ.ರಾಜ್, ವಿಷ್ಣುವರ್ಧನ್ ಮತ್ತು ಶಂಕರ್‌ನಾಗ್ ಅವರಂತಹ ವ್ಯಕ್ತಿತ್ವ ಮತ್ತೊಬ್ಬರಿಗಿಲ್ಲ ಎಂದು ಭಾವುಕರಾದರು.
ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಗುರಿ ಮುಟ್ಟಿಲ್ಲ ಎಂದರೆ ದುರಂತವಲ್ಲ. ವ್ಯಕ್ತಿಗೆ ಗುರಿ ಇಲ್ಲ ಎಂದರೆ ಅದೇ ದೊಡ್ಡ ದುರಂತ. ಬಹುಪಾಲು ಮಂದಿಗೆ ಸ್ಪಷ್ಟ ಗುರಿ ಇರುವುದಿಲ್ಲ ಎಂದರು.
ಅಂತರ ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಚಿತ್ರನಟಿ ರಚನಾ ಇಂದರ್, ವಿಧಾನ ಪರಿಷತ್ ಸದಸ್ಯ ಹಾಗೂ ಬಿಇಟಿ ಟ್ರಸ್ಟ್ ಅಧ್ಯಕ್ಷ ಮಧು ಜಿ.ಮಾದೇಗೌಡ, ಬಿಇಟಿ ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಜಿ.ಡಿ.ಹಳ್ಳಿ ಸಿದ್ದೇಗೌಡ, ಸದಸ್ಯರಾದ ಚಂದೂಪುರ ಪಾಪಣ್ಣ, ಕಾರ್ಕಹಳ್ಳಿ ಬಸವೇಗೌಡ, ಎಸ್.ಜಯರಾಮು, ಮುದ್ದಯ್ಯ, ಗ್ರಾಪಂ ಅಧ್ಯಕ್ಷೆ ಕೌಶಲ್ಯಾ ಅರ್ಕೇಶ್, ಪ್ರಾಂಶುಪಾಲ ಡಾ.ಪಿ.ನಾಗೇಂದ್ರ, ಕಾರ್ಯಕ್ರಮದ ಸಂಯೋಜಕ ಎಸ್.ರೇವಣ್ಣ ಇದ್ದರು.